ಮಂಗಳೂರು: ಕುಳೂರು ಸೇತುವೆ ದುರಸ್ತಿ ಕಾಮಗಾರಿ, ರಸ್ತೆಯುದ್ದಕ್ಕೂ ಸಂಚಾರ ದಟ್ಟಣೆ

ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ ಕೂಳೂರು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಕುಳೂರು ಹಳೆ ಸೇತುವೆಯ ದುರಸ್ತಿ ಕಾಮಗಾರಿ ಬುಧವಾರ ಆರಂಭವಾಗಿದ್ದು, ನಂತೂರು ಮತ್ತು ಸುರತ್ಕಲ್ ನಡುವೆ ದಿನವಿಡೀ ಸಂಚಾರ ವ್ಯತ್ಯಯ ಉಂಟಾಗಿದೆ. ಹೀಗಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆಯನ್ನು ಅನುಭವಿಸುವಂತಾಗಿದೆ.
ಸೇತುವೆಯ ಕೆಳಭಾಗಕ್ಕೆ ಡಾಂಬರು ಹಾಕಲು ಮತ್ತು ಪ್ಲಾಸ್ಟರಿಂಗ್ ಮಾಡಲು ಹಳೇ ಕುಳೂರು ಸೇತುವೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಹಳೆ ಸೇತುವೆಯ ದುರಸ್ತಿ ಕಾರ್ಯ ಮುಗಿದ ನಂತರ ಬುಧವಾರ ರಾತ್ರಿಯಿಂದ ಹೊಸ ಸೇತುವೆಯಲ್ಲೂ ಡಾಂಬರು ಹಾಕುವ ಕಾರ್ಯ ನಡೆಯಲಿದೆ.
ಇದೀಗ ಕಾಮಗಾರಿ ಆರಂಭವಾದ ಹಿನ್ನೆಲೆಯಲ್ಲಿ ಸಂಚಾರ ಬಂದ್ ಮಾಡಿರುವುದರಿಂದ ರಸ್ತೆಯುದ್ದಕ್ಕೂ ಟ್ರಾಫಿಕ್ ಜಾಮ್ ಸಂಭವಿಸಿದೆ. ವಾಹನ ಸಂಚಾರಕ್ಕೆ ಸೇತುವೆಯ ಒಂದು ಕಡೆಯಲ್ಲಿ ಅನುವು ಮಾಡಿಕೊಟ್ಟಿದ್ದರೂ ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿದೆ. ವಾಹನಗಳು ಸಂಚರಿಸಲು ಒಂದೇ ಸೇತುವೆಯನ್ನು ಬಳಸುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ.
