ಮೂಡುಬಿದಿರೆ : ಮೂಡುಬಿದಿರೆಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ವಾಹನಗಳ ನಿಲುಗಡೆಗೆ ಸಮಸ್ಯೆಯಾಗುತ್ತಿದೆ ಆದ್ದರಿಂದ ಬಸ್ ನಿಲ್ದಾಣ ಸಹಿತ ಇತರ ವಾಹನಗಳ ಪಾರ್ಕಿಂಗ್ ಗೆ ಸರಿಯಾದ ಜಾಗವನ್ನು ಪುರಸಭೆ ಸೂಚಿಸಬೇಕು ಎಂದು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಅನಂತಪದ್ಮನಾಭ ಸಲಹೆ ನೀಡಿದ್ದಾರೆ.

ಅವರು ಪುರಸಭಾಧ್ಯಕ್ಷೆ ಸುಪ್ರಿಯಾ.ಡಿ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಪುರಸಭಾ ಸಭಾಂಗಣದಲ್ಲಿ ಟ್ರಾಫಿಕ್ ಮತ್ತು ವಾಹನಗಳ ಪಾಕಿಂಗ್ ವ್ಯವಸ್ಥೆಯ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದರು. ಮೂಡುಬಿದಿರೆಗೆ ಬರುವ ದೂರದೂರುಗಳ ಪ್ರವಾಸಿಗರಿಗೆ ಇಲ್ಲಿರುವ ಪ್ರವಾಸಿ ತಾಣಗಳ ಬಗ್ಗೆ, ಬಸ್, ಇತರ ವಾಹನಗಳ ಪಾರ್ಕಿಂಗ್ ಎಲ್ಲಿ ಮಾಡಬೇಕೆಂಬುದರ ಮಾಹಿತಿ ನೀಡುವ ಫಲಕ ಮತ್ತು ಮಾರ್ಗಸೂಚಿಯನ್ನು ಗುರುತಿಸಿದರೆ ಜನರಿಗೆ ಸುಲಭವಾಗುತ್ತದೆ.

ಈ ಹಿಂದೆ ಪುರಸಭೆಯು ಪಾರ್ಕಿಂಗ್ ಸುವ್ಯವಸ್ಥೆಯ ಬಗ್ಗೆ ಸಭೆಯನ್ನು ನಡೆಸಿ ಪೊಲೀಸ್ ಇಲಾಖೆಯಿಂದ ಝೀಬ್ರಾ ಕ್ರಾಸಿಂಗ್, ರಸ್ತೆ ಉಬ್ಬುಗಳನ್ನು ಹಾಕುವಂತೆ ಮಾಹಿತಿ ನೀಡಿದ್ದು ಈ ಕೆಲಸಗಳು ತಮ್ಮಿಂದ ಸಂಪೂರ್ಣಗೊಂಡಿದೆ ಆದರೆ ಪುರಸಭೆಯಿಂದ ಆಗಬೇಕಾದ ಕೆಲಸಗಳು ಮಾತ್ರ ಬಾಕಿ ಉಳಿದಿವೆ ಎಂದು ಹೇಳಿದ ಅವರು ತಾವು ಪಾರ್ಕಿಂಗ್ ವ್ಯವಸ್ಥೆಯನ್ನು ಸರಿಯಾಗಿ ಮಾಡಿದರೆ ಮಾತ್ರ ಟ್ರಾಫಿಕ್ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

mbd_dec4_5
ಮೂಡುಬಿದಿರೆಯ ಹನುಮಂತ ದೇವಾಸ್ಥಾನದ ಎದುರುಗಡೆ ಇರುವ ರಸ್ತೆ, ತಹಶೀಲ್ದಾರ್ ಕಛೇರಿಯ ಎದುರಿನ ಆಳ್ವಾಸ್ ರಸ್ತೆ, ಮಾರ್ಕೆಟ್  ಬದಿಯ ಪದ್ಮಾವತಿ ಕಲಾ ಮಂದಿರಕ್ಕೆ ಹೋಗುವ ರಸ್ತೆ, ಆಳ್ವಾಸ್ ಹಾಸ್ಪಿಟಲ್ಗೆ ಹೋಗುವ ರಸ್ತೆ ಮತ್ತು ಮೂಡುಬಿದಿರೆ ಬಸ್ ನಿಲ್ದಾಣಕ್ಕೆ ಬರುವ ರಸ್ತೆಯನ್ನು ಏಕಮುಖ ರಸ್ತೆಯನ್ನಾಗಿ ಗುರುತಿಸಲಾಗುವುದು, ಮಾರ್ಗಸೂಚಿಯನ್ನು ಅಳವಡಿಸುವುದು, ಈಗ ಇರುವ ಪಾರ್ಕಿಂಗ್ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಲಾಗುವುದು, ಮೂಡುಬಿದಿರೆಯಲ್ಲಿ ಈಗಾಗಲೇ ಹಲವು ಆಟೋಗಳ ಪಾರ್ಕಿಂಗ್ ಗಳಿದ್ದು ಅವುಗಳನ್ನು ಸಂಖ್ಯೆಗಳಿಗುಣವಾಗಿ ಖಾಯಂಗೊಳಿಸುವ ಬಗ್ಗೆ ಚಿಂತನೆ ಮಾಡಬೇಕಾಗಿದೆ ಎಂದು ಸದಸ್ಯ ಪಿ.ಕೆ.ಥೋಮಸ್ ಸಲಹೆ ನೀಡಿದರು.

ನಗರ ಪ್ರದೇಶದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಖಾಸಗಿ ವಾಹನವನ್ನು ಪಾರ್ಕಿಂಗ್  ಮಾಡುವವರಿಗೆ ಫೇ ಮಾಡಬೇಕು, ಸಮಾಜಮಂದಿರದ ಎದುರುಗಡೆ ಇರುವ ಆಟೋ ಪಾರ್ಕಿಂಗನ್ನು  ಸ್ವಲ್ಪ ಹಿಂದುಗಡೆ ಸರಿಸಿ ಉದ್ದಕ್ಕೆ ಪಾರ್ಕಿಂಗ್ ಮಾಡಬೇಕು ಎಂದು ಸದಸ್ಯ ಕೊರಗಪ್ಪ ಸಲಹೆ ನೀಡಿದರು. ಮಹಾವೀರ ಕಾಲೇಜಿನ ಬಳಿ ಇರುವ ಆಟೋ ಪಾರ್ಕನ್ನು ಅಲ್ಲಿಯೇ ಸಮೀಪ ಇರುವ ಜಾಗಕ್ಕೆ ಸ್ಥಳಾಂತರಿಬೇಕಾಗಿದೆ ಎಂದು ಸದಸ್ಯ ಸುರೇಶ್ ಕೋಟ್ಯಾನ್ ಸಲಹೆ ನೀಡಿದರು.

ಪುರಸಭಾ ಉಪಾಧ್ಯಕ್ಷೆ ಎಲಿಜಾ ಡಿ’ಸೋಜಾ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಬಶೀರ್, ಪುರಸಭಾ ಮುಖ್ಯಾಧಿಕಾರಿ ಶೀನ ನಾಯ್ಕ್ ಮತ್ತು ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *