ಮೆಲ್ಕಾರ್ ನಲ್ಲಿ ವಾಹನಗಳನ್ನು ತಡೆದು ಹಠಾತ್ ಪ್ರತಿಭಟನೆ
ಬಂಟ್ವಾಳ: ಮಳೆ ಬಂದರೆ ಕೆಸರು, ಮಳೆ ನಿಂತರೆ ಧೂಳು..ಇದು ಬಿ.ಸಿ.ರೋಡು-ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾದಂದಿನಿಂದ ಕಂಡು ಬರುವ ದೃಶ್ಯ.ಇನ್ನೂ ಕಾಮಗಾರಿ ಮುಗಿಯುವವರೆಗಂತು ಈ ಸಮಸ್ಯೆ ಮಾತ್ರ ತಪ್ಪಿದ್ದಲ್ಲ.

ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ.ಕಂಪೆನಿ ಕೊಟ್ಟ ಮಾತು ತಪ್ಪಿದರೂ ಇಲ್ಲಿನ ಸಮಸ್ಯೆ ಮಾತ್ರ ಸದ್ಯಕ್ಕಂತು ಮುಗಿಯುವುದಿಲ್ಲ. ನಿರಂತರವಾಗಿ ಈ ಸಮಸ್ಯೆಯಿಂದ ಬಳಲಿರುವ ಸಾರ್ವಜನಿಕರ ಸಹನೆಯ ಕಟ್ಟೆ ಒಡೆದು ಸೋಮವಾರು ನಾಗರಿಕರು ಕಂಪೆನಿಯ ವಾಹನಗಳನ್ನು ತಡೆದು ಹಠಾತ್ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದ ವಿದ್ಯಮಾನವು ಮೆಲ್ಕಾರಿನಲ್ಲಿ ನಡೆಯಿತು.

ಮಂಗಳೂರು – ಬೆಂಗಳೂರು ಜೊತೆಗೆ ಕೋಣಾಜೆ ಯುನಿವರ್ಸಿಟಿ ಸಂಪರ್ಕದ ಕೊಂಡಿಯಾಗಿರುವ ಮೆಲ್ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವಾಂತರದಿಂದ ನಿತ್ಯ ಗೋಳು ತಪ್ಪಿದ್ದಲ್ಲ. ಮಳೆ ಬಂತೆಂದರೆ ಕೆಸರು ತುಂಬುತ್ತದೆ, ಮಳೆ ನಿಂತರೆ ದೂಳು ಎದ್ದು ಬರುತ್ತದೆ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಕಂಪೆನಿ ವಿಫಲವಾದ ಹಿನ್ನೆಲೆಯಲ್ಲಿ ಇಲ್ಲಿನ ವ್ಯಾಪಾರಸ್ಥರು, ಅಂಗಡಿ ಮಾಲಕರು ಮತ್ತು ಸಾರ್ವಜನಿಕರು ಒಗ್ಗಟ್ಟಾಗಿ ಕಂಪೆನಿಯ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.
ಮಳೆಗಾಲದಲ್ಲಿ ಹೊಂಡಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸಂಚಾರ ಮಾಡುವಂತಿಲ್ಲ ,ಇದು ಒಂದು ಭಾಗವಾದರೆ, ಇದೀಗ ಎರಡು ದಿನಗಳಿಂದ ಮಳೆ ನಿಂತ ಪರಿಣಾಮ ಮಣ್ಣು ಮಿಶ್ರಿತ ರಸ್ತೆಯಲ್ಲಿ ದೂಳು ಏಳುತ್ತಿದ್ದು ಅಂಗಡಿ ಮಾಲಕರು ವ್ಯಾಪಾರ ಮಾಡುವಂತಿಲ್ಲ,ಹತ್ತಿರದ ಮನೆಯವರು ವಾಸ ಮಾಡುವಂತಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ದೂಳಿನಿಂದ ಸ್ಥಳೀಯ ನಿವಾಸಿಗಳು ಕೆಮ್ಮು ಸಹಿತ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುವ ಸಾಧ್ಯತೆಗಳಿವೆ ಎಂದು ಸಾರ್ವಜನಿಕರು ಆಳಲು ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಬಗ್ಗೆ ಸ್ಪಷ್ಟವಾದ ಮಾತು ಕೊಟ್ಟ ಬಳಿಕವೇ ತಡೆದ ವಾಹನಗಳನ್ನು ಬಿಡಲಾಗುವುದು ಎಂದು ಪ್ಋಇಭಟನಾಕಾರರು ಪಟ್ಟು ಹಿಡಿದರು.
ಕೊನೆಗೆ ಕಂಪೆನಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಅ.18 ರ ಬಳಿಕ ಮೆಲ್ಕಾರಿನಲ್ಲಿ ರಸ್ತೆಗೆ ಡಾಮರು ಹಾಕಿ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ವ್ಯಾಪಾರ ಕೇಂದ್ರವಾಗಿ ಬೆಳೆಯುತ್ತಿರುವ ಮೆಲ್ಕಾರಿನಲ್ಲಿ ಅವೈಜ್ಞಾನಿಕ ವಾಗಿ ಅಂಡರ್ ಪಾಸ್ ನಿರ್ಮಿಸಿ ಇಲ್ಲಿನ ವ್ಯಾಪಾರಿಗಳಿಗೆ ಅನ್ಯಾಯ ಮಾಡಲಾಗಿದೆ ಎಂಬ ಆರೋಪವು ಈ ಸಂದರ್ಭ ಕೇಳಿ ಬಂತು.