ಕಾರವಾರ : ಕುಸಿದು ಬಿದ್ದ ಕಾಳಿ ಸೇತುವೆ, ನದಿಗೆ ಬಿದ್ದ ಲಾರಿ, ಚಾಲಕನ ರಕ್ಷಣೆ
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಅತಿಯಾಗಿ ಸುರಿದ ಮಳೆಯಿಂದಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿತ ಕಂಡಿದ್ದು, ಇದರಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಇದೀಗ ಮತ್ತೊಂದು ಘಟನೆಯು ನಡೆದಿದ್ದು ಕಾರವಾರದ ಸೇತುವೆ ಕುಸಿದು ಬಿದ್ದಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ರಾಷ್ಟ್ರೀಯ ಹೆದ್ದಾರಿ 66 ಕಾಳಿ ನದಿ ಸೇತುವೆಗೆ ಅಡ್ಡಲಾಗಿ ಕಟ್ಟಿರುವ ನಲವತ್ತುವರ್ಷಗಳಷ್ಟು ಹಳೆಯದಾದ ಸೇತುವೆ ಕುಸಿದು ಬಿದ್ದಿದೆ. ಈ ವೇಳೆ ತಮಿಳುನಾಡು ಮೂಲದ ಲಾರಿಯೊಂದು ನದಿಯಲ್ಲಿ ಬಿದ್ದಿದ್ದು, ಚಾಲಕ ಬಾಲ ಮುರುಗನ್ ಎನ್ನುವ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ.
ಹೌದು, ಗೋವಾದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಲಾರಿಯು ಕಾಳಿನದಿಯ ಸೇತುವೆ ಮೇಲೆ ವೇಗವಾಗಿ ಹೋಗುತಿದ್ದ ವೇಳೆ ಸೇತುವೆ ಕುಸಿದು ಬಿದ್ದಿದೆ ಎನ್ನಲಾಗಿದೆ. ಚಾಲಕನು ಕೆಳಗೆ ಬಿದ್ದ ಲಾರಿಯ ಕ್ಯಾಬಿನ್ ಮೇಲೆ ನಿಂತು ರಕ್ಷಣೆಗಾಗಿ ಕೂಗಿದ್ದಾನೆ. ಅಲ್ಲೇ ಸ್ಥಳೀಯ ಮೀನುಗಾರರು ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ತಕ್ಷಣವೇ ಕರಾವಳಿ ಕಾವಲುಪಡೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಚಾಲಕನನ್ನು ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಅದಲ್ಲದೇ, ಕಾಳಿ ನದಿಯ ಹಳೆಯ ಸೇತುವೆ ಇದಾಗಿದ್ದು ಸುಮಾರು ಮೂರು ಕಡೆ ಕುಸಿದಿದೆ. ಈ ಹಿನ್ನಲೆಯಲ್ಲಿ ಗೋವಾ -ಕಾರವಾರ ಮಾರ್ಗದ ಎರಡು ಭಾಗದ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಸ್ಥಳೀಯ ಶಾಸಕ ಸತೀಶ್ ಸೈಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆ ಬಳಿಕ ಆಸ್ಪತ್ರೆಗೆ ತೆರಳಿ ಗಾಯಾಳು ಚಾಲಕನ ಆರೋಗ್ಯ ವಿಚಾರಿಸಿ ಘಟನೆ ಕುರಿತಂತೆ ಪ್ರತ್ಯಕ್ಷದರ್ಶಿ ಬಳಿ ಮಾಹಿತಿಯನ್ನು ಕಲೆ ಹಾಕಿದ್ದಾರೆ.