ಮಾಣಿಯ ಬೊಳ್ಳುಕಲ್ಲುವಿನಲ್ಲಿ ಕೆಸ್ ಆರ್ ಟಿ ಸಿ ಬಸ್ ನಿಲುಗಡೆಗೆ ಆಗ್ರಹಿಸಿ ಮನವಿ
ಬಂಟ್ವಾಳ: ಮಾಣಿ ಸಮೀಪದ ಬೊಳ್ಳುಕಲ್ಲು ಎಂಬಲ್ಲಿ ಕೆಸ್ ಆರ್ ಟಿ ಸಿ ಬಸ್ ನಿಲುಗಡೆಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಆಗ್ರಹಿಸಿ ಸ್ಥಳೀಯರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರಿಗೆ ಮನವಿ ಸಲ್ಲಿಸಿದರು.
ಪೆರಾಜಿ ಗ್ರಾಮದ ಬೊಳ್ಳುಕಲ್ಲು ಪ್ರದೇಶ ಜನನಿಬಿಡ ಸ್ಥಳವಾಗಿದ್ದು, ಮಾಣಿಯಿಂದ ಸುಮಾರು 1.7ಕಿ ಮೀ ದೂರವಿದೆ. ಇಲ್ಲಿಂದ ವಿದ್ಯಾರ್ಥಿಗಳು,ಕಾರ್ಮಿಕರು,ಉದ್ಯೋಗಿಗಳು, ಹೀಗೆ ಸಾಕಷ್ಟು ಮಂದಿ ಇಲ್ಲಿ ಬಸ್ಸಿಗಾಗಿ ಕಾಯುತ್ತಿರುತ್ತಾರೆ.
ಈ ತಂಗುದಾಣದಲ್ಲಿ ಹಿಂದೆ ಎಲ್ಲಾ ಬಸ್ಸುಗಳ ನಿಲುಗಡೆಯಗುತ್ತಿತ್ತು. ಬಸ್ ತಂಗುದಾಣ ಎಂಬ ನಾಮಫಲಕವನ್ನು ಅಳವಡಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವೇಳೆ ಇಲ್ಲಿನ ಬಸ್ ತಂಗುದಾಣ ಮತ್ತು ನಾಮಫಲಕವನ್ನು ತೆರವು ಮಾಡಲಾಗಿದೆ. ತದನಂತರದಿಂದ ಇಲ್ಲಿ ಯಾವುದೇ ಬಸ್ಸುಗಳು ನಿಲುಗಡೆಗೊಳಿಸಲಾಗುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಪ್ರದೇಶದಲ್ಲಿ ಶ್ರೀರಾಮಚಂದ್ರಪುರ ಮಠ, ಭಜನಾ ಮಂದಿರಗಳು, ಫ್ಯಾಕ್ಟರಿಗಳಿದ್ದು,ಜನರ ಅನುಕೂಲದ ದೃಷ್ಠಿಯಿಂದ ಬೊಳ್ಳಕಲ್ಲು ಸ್ಥಳದಲ್ಲಿ ಎಲ್ಲಾ ಬಸ್ಸುಗಳನ್ನು ನಿಲುಗಡೆಗೊಳಿಸಲು ಕ್ರಮ ಕೈಗೊಳ್ಳುವಮನತೆ ಬೊಳ್ಳುಕಲ್ಲು ಭಾಗದ ಸಾರ್ವಜನಿಕರು ಮನವಿಯಲ್ಲಿ ಕೋರಿದ್ದಾರೆ.
ಖಾಸಗಿ ಬಸ್ ನಿಲುಗಡೆಗೆ ಕ್ರಮ:
ಖಾಸಗಿ ಬಸ್ ಗಳು ಕೂಡ ಇಲ್ಲಿ ಬಸ್ ಗಳನ್ನು ನಿಲುಗಡೆಗೊಳಿಸದಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಮಂಗಳೂರು ಸಹಿತ ವಿವಿದೆಡೆಗಳಿಗೆ ಜನರು ಪ್ರಯಾಣಿಸುತ್ತಿದ್ದು, ಇತ್ತೀಚೆಗಿನ ದಿನಗಳಲ್ಲಿ ಖಾಸಗಿ ಬಸ್ ಗಳು ಕೂಡ ನಿಲುಗಡೆ ಮಾಡುತ್ತಿಲ್ಲ ಎಂದು ದೂರಲಾಗಿದೆ. ಈ ಬಗ್ಗೆ ಪ್ರಯಾಣಿಕರು ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷರಿಗೂ ಮನವಿ ಮಾಡಿದ್ದಾರೆ.ಇದಕ್ಕೆ ಸ್ಪಂದಿಸಿದ ಅಧ್ಯಕ್ಷ ಶಫೀಕ್ ಅವರು, ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪೆರಾಜೆ ಗ್ರಾಮಪಂಚಾಯತ್ ಸದಸ್ಯ ಹರೀಶ್ ರೈ ಪೆರಾಜೆ, ದಿನಕರ ಪೂಜಾರಿ, ಅಣ್ಣಿ ಪೂಜಾರಿ, ಜನಾರ್ದನ ಕುಲಾಲ್ , ಗಣೇಶ್ ಪೂಜಾರಿ ಕೊಂಕಣಪದವು ಹಾಜರಿದ್ದರು.