ಬಂಟ್ವಾಳದಲ್ಲಿ ಅಪಾಯದ ಮಟ್ಟ ಮೀರಿ ಹರಿದ ನೇತ್ರಾವತಿ ,ಜನಜೀವನ ಅಸ್ತವ್ಯಸ್ತ,ಎಲ್ಲೆಡೆ ಜಲಾವೃತ
ಬಂಟ್ವಾಳ :ಎರಡುದಿನಗಳ ಕಾಲ ಬಿಡುವು ನೀಡಿದ್ದ ಮಳೆ ಸೋಮವಾರ ಸಂಜೆಯಿಂದ ವಿಪರೀತ ಗಾಳಿ,ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಂಗಳವಾರ ಬೆಳಗ್ಗೆಯಿಂದಲೇ
ನೇತ್ರಾವತಿ ನದಿ ಅಪಾಯದ ಮಟ್ಟವನ್ನು ಮೀರಿ ಮೈದುಂಬಿ ಹರಿದಿದ್ದು,ಸಂಜೆ 5 ಗಂಟೆಯ ವೇಳೆಗೆ ನೇತ್ರಾವತಿ ನದಿ 9.6 ಮೀ.ನಲ್ಲಿ ಮೈದುಂಬಿ ಹರಿದಿರುವುದರಿಂದ ಬಂಟ್ವಾಳದಲ್ಲಿ ಎಲ್ಲೆಲ್ಲು ನೀರೆನೀರು ಕಂಡುಬಂತು.
1974 ನೆರೆಯನ್ನು ಮತ್ತೆ ನೆನಪಿಸುವಂತೆ ನೇತ್ರಾವತಿಯಲ್ಲಿ ನೀರು ಗಂಟೆಗೊಮ್ಮೆ ಏರಿಕೆಯಾಗುತ್ತಿದ್ದು,ಜನತೆ ಆತಂಕಕ್ಕೊಳಗಾಗಿದ್ದಾರೆ.
ಪಾಣೆಮಂಗಳೂರು, ಬಂಟ್ವಾಳ, ಸರಪಾಡಿ,ಜಕ್ರಿಬೆಟ್ಟಿನ ಕೊಟ್ರಕಣಿ, ಕಂಚಿಕಾರ ಪೇಟೆ,ಬಸ್ತಿಪಡ್ಪ ,ಬಡ್ಡಕಟ್ಟೆ ಸಹಿತ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರೆ ಪಾಣೆಮಂಗಳೂರಿನ ಆಲಡ್ಕದಲ್ಲಿ ಮಾಮೂಲಿಯಂತೆ ಸುಮಾರು ಹದಿನೈದು ಮನೆಗಳು ಜಲಾವೃತಗೊಂಡಿದೆ.
ಬಂಟ್ವಾಳ ಸಮೀಪದ ಜಕ್ರಿಬೆಟ್ಟುವಿನ ಕೊಟ್ರಕಣಿ,ಕಂಚಿಕಾರ ಪೇಟೆ, ಬಸ್ತಿಪಡ್ಪುವಿಲ್ಲಿ ರಸ್ತೆಯನ್ನು ನೀರು ಅವರಿಸಿದ ಹಿನ್ನಲೆಯಲ್ಲಿ ಈ ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿತ್ತು.
ಬಂಟ್ವಾಳ ಬಡ್ಡಕಟ್ಟೆಯ ಬಸ್ ತಂಗುದಾಣವು ಜಲಾವೃತಗೊಂಡರೆ, ಇಲ್ಲಿರುವ ಪುರಸಭೆಯ ಎರಡು ವಾಣಿಜ್ಯಸಂಕಿರ್ಣದಲ್ಲಿ ತಳಭಾಗದ ಎಲ್ಲಾ ಹೊಟೇಲ್, ಅಂಗಡಿಗಳಿಗೆ ನೀರು ನುಗ್ಗಿದೆ. ಬ್ರಹ್ಮರಕೊಟ್ಲು,ಆರ್ಕುಳ,ಸರಪಾಡಿ,ಸಜೀಪ,
ಭಂಡಾರಿಬೆಟ್ಟು,ದೇವರಕಟ್ಟೆ ಮೊದಲಾದ ತಗ್ಗುಪ್ರದೇಶದಲ್ಲಿ ಜಲಾವೃತಗೊಂಡಿದ್ದು, ತೋಟ, ಗದ್ದೆಯಲ್ಲಿ ನೀರು ನಿಲುಗಡೆಯಾಗಿದೆ.
ಬಂಟ್ವಾಳ ಮೂಡೂರು- ಪಡೂರು ಜೋಡುಕರೆ ನಡೆಯುವ ಕೂಡಿಬೈಲು ಕಂಬಳ ಗದ್ದೆ ನದಿಯಂತೆ ನೀರು ನಿಂತು ಸಂಪೂರ್ಣ ಜಲಾವೃತ ಗೊಂಡ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಕ್ರಬೆಟ್ಟು ಸೇತುವೆ ಮತ್ರು ಅಣೆಕಟ್ಟಿನ ಹಾಗೂ ತುಂಬೆ ಡ್ಯಾಂನ ಎಲ್ಲಾ ಗೇಟ್ ಗಳನ್ನು ತೆರೆಯಲಾಗಿದೆ.
ಸರಪಾಡಿ ಎಂಆರ್ ಪಿಎಲ್ ,ಶಂಭೂರು ,ತುಂಬೆ ಡ್ಯಾಂಗಳ ಎಲ್ಲಾ ಗೇಟ್ ತೆರದು ಆಗಾಗ ಹೆಚ್ಚುವರಿ ನೀರನ್ನು ಕೆಳಗಡೆ ಹರಿಯಬಿಡಲಾಗುತಿತ್ತು.
ಮುಳುಗಡೆ ಭೀತಿಯಲ್ಲಿದ್ದ ಮನೆಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ತಾಲೂಕಾಡಳಿತ, ಪುರಸಭೆ ಸರ್ವಸನ್ನದ್ದವಾಗಿದ್ದು, ಸಂಭವಿಸಬಹುದಾದ ಯಾವುದೇ ಅಪಾಯವನ್ನು ಎದುರಿಸಲು ಸಜ್ಜಾಗಿದೆ.
ನೆರೆಯ ಬಳಿಕ ಎಚ್ಚೆತ್ತ ಆಡಳಿತ:
ನೇತ್ರಾವತಿ ನದಿ ಉಕ್ಕಿ ತನ್ನ ದಿಕ್ಕು ಬದಲಿಸುತ್ತಿದ್ದು,ಬಡ್ಡಕಟ್ಟೆಯ ಕಿರು ತೋಡಿನಲ್ಲಿ ಭರ್ತಿಯಾದ ನೀರು ಪಕ್ಕದ ಅಡಕೆ ತೋಟ,ಗದ್ದೆಯ ಮೂಲಕ ಹಾದು ಕೊಟ್ರಮಣ ಗಂಡಿಯ ಕಿರುಸೇತುವೆಯ ಅಡಿಯಿಂದ ನೀರು ಭಂಡಾರಿಬೆಟ್ಟು ತೋಡನ್ನು ಸೇರುತ್ತದೆ.
ದೇವರಕಟ್ಟೆ ಬಳಿರುವ ಕಿರು ಸೇತುವೆಯ ಒಂದು ಬದಿ ಖಾಸಗಿ ವ್ಯಕ್ತಿಯೋರ್ವರು ತನ್ನ ಜಮೀನಿಗೆ ಮಣ್ಣುಹಾಕಿ ಸಮತಟ್ಟುಗೊಳಿಸಿದರಿಂದ ನೆರೆ ನೀರು ಮುಂದಕ್ಕೆ ಸಾಗದೆ ವಿ.ಪಿ.ರಸ್ತೆಗೆ ನುಗ್ಗಿತ್ತು.ನೆರೆಪೀಡಿತ ಸ್ಥಳಗಳಿಗೆ ಭೇಟಿ ನೀಡಿದ ಶಾಸಕ ರಾಜೇಶ್ ನಾಯ್ಕ್ ,ಪುರಸಭಾ ಸದಸ್ಯ ಗೋವಿಂದ ಪ್ರಭು ಮತ್ತು ನಿಯೋಗ ಈ ಮಣ್ಣು ಹಾಕಲಾದ ಸ್ಥಳವನ್ನು ಪರಿಶೀಲಿಸಿ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣ ನೆರೆ ನೀರು ಸರಾಗವಾಗಿ ಸಾಗಲು ಉಂಟಾಗಿರುವ ತಡೆಯನ್ನು ತೆರವುಗೊಳಿಸುವಂತೆ ತಾಲೂಕು ಅಧಿಕಾರಿಗಳಿಗೆ ಸೂಚಿಸಿದರು.ಬಳಿಕ ಎಚ್ಚೆತ್ತ ಪುರಸಭೆ ಜೆಸಿಬಿ ಬಳಸಿ ಸೇತುವೆ ಬದಿಯಲ್ಲಿ ನೀರು ಸಾಗಲು ಮಣ್ಣು ತೆರವು ಕಾರ್ಯ ನಡೆಸಿದರು.ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ,ಪುರಸಭಾ ಸದಸ್ಯ ಗೋವಿಂದಪ್ರಭು, ಮಾಜಿ ಸದಸ್ಯ ಗಂಗಾಧರ ಪೂಜಾರಿ ಮತ್ತಿತರರಿದ್ದರು.