ಬಂಟ್ವಾಳ : ಅದಿವಾಸಿಗಳ ಮನೆಯಲ್ಲಿಪತ್ರಿಕಾ ದಿನಾಚರಣೆ
ಬಂಟ್ವಾಳ: ಬೋಳಂತೂರು ಗ್ರಾಮದ ನಾರಂಕೋಡಿಯಲ್ಲಿ ಆದಿವಾಸಿ ಸಮುದಾಯಕ್ಕೆ ಕೃಷಿ ಭೂಮಿ ಮಂಜೂರಾತಿಗೆ ಸಂಬಂಧಿಸಿ ಅವಕಾಶಗಳ ಕುರಿತು ಪರಿಶೀಲನೆ ಮಾಡಿಕೊಂಡು ಗರಿಷ್ಠ ಪ್ರಯತ್ನ ಮಾಡುತ್ತೇನೆ. ಜತೆಗೆ ಎರಡು ಕುಟುಂಬಗಳಿಗೆ ಆಹಾರ ಕಿಟ್ ಸಿಗದೇ ಇರುವ ಕುರಿತು ಪರಿಶೀಲಿಸುತ್ತೇವೆ, ಬುಟ್ಟಿ ಹೆಣೆಯುವ ಶೆಡ್‌ನ್ನು ವಿಸ್ತರಣೆಗೆ ಐಟಿಡಿಪಿಯವರ ಜತೆ ಮಾತುಕತೆ ನಡೆಸುತ್ತೇನೆ ಎಂದು ಬಂಟ್ವಾಳ ತಹಶೀಲ್ದಾರ್ ಅರ್ಚನಾ ಡಿ.ಭಟ್ ಹೇಳಿದರು.

ಅವರು ಬೋಳಂತೂರು ಗ್ರಾಮದ ನಾರಂಕೋಡಿಯ ಆದಿವಾಸಿ ಕಾಲನಿಯಲ್ಲಿ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ಪ್ರೆಸ್‌ಕ್ಲಬ್ ವತಿಯಿಂದ ದ.ಕ.ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ ನಡೆದ ಆದಿವಾಸಿ ಅಭಿವೃದ್ಧಿ: ಅರಿವು-ನೆರವು ಕಾರ್ಯಕ್ರಮದಲ್ಲಿ ಸಮುದಾಯದ ಅಹವಾಲು ಆಲಿಸಿ ಮಾತನಾಡಿದರು.

ಆದಿವಾಸಿ ಮಹಿಳೆ ಮೈರೆ ಅವರು ತಮ್ಮ ಅಹವಾಲು ಮಂಡಿಸಿದರು. ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಹಾಗೂ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅವರು ಇಂತಹ ಕಾರ್ಯಕ್ರಮ ಆಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಂಟ್ವಾಳ ತಾಲೂಕು ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಡಿಪು ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ, ಸಹನಿರ್ದೇಶಕ ಕೃಷ್ಣ ಮೂಲ್ಯ, ಜಿಲ್ಲಾ ಸಂಘದ ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ, ವಿಟ್ಲ ಕಂದಾಯ ನಿರೀಕ್ಷಕ ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.

ಆದಿವಾಸಿ ಕುಟುಂಬಗಳಿಗೆ ಅಕ್ಕಿ ವಿತರಿಸಲಾಯಿತು. ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಮೂಲಕ ಆರೋಗ್ಯ ತಪಾಸಣೆ ನಡೆಸಲಾಯಿತು. ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರ್ವಹಿಸಿದರು.ಸದಸ್ಯಕಿರಣ್ ಸರಪಾಡಿ ವಂದಿಸಿದರು.
ಪತ್ರಕರ್ತರ ಸಂಘದ ಸದಸ್ಯರಾದ ವೆಂಕಟೇಶ್ ಬಂಟ್ವಾಳ, ರತ್ನದೇವ ಪುಂಜಾಲಕಟ್ಟೆ, ಗಣೇಶ ಪ್ರಸಾದ ಪಾಂಡೇಲು, ಹರೀಶ ಮಾಂಬಾಡಿ, ರಮೇಶ್ ಕೆ. ಪುಣಚ, ಕಿಶೋರ್ ಪೆರಾಜೆ, ಚಂದ್ರಶೇಖರ ಕಲ್ಮಲೆ ಉಪಸ್ಥಿತರಿದ್ದರು.