ಬಂಟ್ವಾಳ: ಉಕ್ಕಿ ಹರಿದ ನೇತ್ರಾವತಿ, ನೆರೆ ಏರಿಕೆ ಹಲವೆಡೆ ಹಾನಿ, ಮುಂದುವರಿದ ಮಳೆಹಾನಿ
ಬಂಟ್ವಾಳ:ತಾಲ್ಲೂಕಿನಾದ್ಯಂತ ಗುರುವಾರ ರಾತ್ರಿ ಮತ್ತು ಶುಕ್ರವಾರ ದಿನವಿಡೀ ಸಾಧಾರಣ ಗಾಳಿ ಮಳೆಯಾಗಿದ್ದು, ನೇತ್ರಾವತಿ ನದಿಯಲ್ಲಿ ಬೆಳಿಗ್ಗೆ 8.1 ಮೀ. ಏರಿಕೆ ಕಂಡಿದ್ದ ನೀರಿನ ಮಟ್ಟ ಸಂಜೆಯಾಗುತ್ತಿದ್ದಂತೆಯೇ 8.6ಕ್ಕೆ ಏರಿಕೆಯಾಗಿ ಅಪಾಯದ ಹಂತ ತಲುಪಿದೆ.
ಇಲ್ಲಿನ ಪಾಣೆಮಂಗಳೂರು ಸಮೀಪದ ಆಲಡ್ಕ ತಗ್ಗು ಪ್ರದೇಶಗಳ 10 ಮನೆ ಸ್ಥಳಾಂತರಗೊಂಡಿದ್ದು, ಮತ್ತಷ್ಟು ಮನೆಗಳು ಜಲಾವೃತಗೊಳ್ಳುವ ಭೀತಿ ಎದುರಿಸುತ್ತಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಶುಕ್ರವಾರ ಸಂಜೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು. ತಹಶೀಲ್ದಾರ್ ಅರ್ಚನಾ ಭಟ್, ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಆರೋಗ್ಯ ನಿರೀಕ್ಷಕ ರತ್ನಪ್ರಸಾದ್ ಮತ್ತಿತರರು ಇದ್ದರು.
ಇಲ್ಲಿನ ಪುರಸಭಾ ವ್ಯಾಪ್ತಿಯ ಬಡ್ಡಕಟ್ಟೆ ಬಸ್ ತಂಗುದಾಣ ಬಹುತೇಕ ಜಲಾವೃತಗೊಂಡಿದ್ದು, ಇಲ್ಲಿನ ಮಾರುಕಟ್ಟೆಯಲ್ಲಿ ಮೀನು ಮತ್ತು ಮಾಂಸದಂಗಡಿ ಬಳಿ ನೀರು ನುಗ್ಗಲು ಕ್ಷಣಗಣನೆಯಲ್ಲಿದೆ. ಒಟ್ಟಿನಲ್ಲಿ ನೀರಿನ ಮಟ್ಟ ಇದೇ ರೀತಿ ಏರಿಕೆಯಾದಲ್ಲಿ ಬಹುತೇಕ ಅಡಿಕೆ ತೋಟಗಳು ಸೇರಿದಂತೆ ಮನೆ ಮತ್ತು ಅಂಗಡಿ ಜಲಾವೃತಗೊಳ್ಳಲಿದ್ದು, ಕೆಲವೊಂದು ತಗ್ಗು ಪ್ರದೇಶದ ರಸ್ತೆಗಳು ಕೂಡಾ ಮುಳುಗಡೆಯಾಗುವ ಸಾಧ್ಯತೆ ಕಂಡು ಬಂದಿದೆ ಎನ್ನುತ್ತಾರೆ ಸ್ಥಳೀಯರು.
ಮಳೆಹಾನಿ:
ಬಾಳ್ತಿಲ ಗ್ರಾಮದ ಕಂಟಿಕ ನಿವಾಸಿ ಸೋಮಪ್ಪ ನಾಯ್ಕ ಎಂಬವರ ಮನೆಗೆ ಅಡಿಕೆ ಮರ ಬಿದ್ದು, ಚಾವಣಿ ಹಾನಿಗೀಡಾಗಿದೆ. ಇದೇ ಗ್ರಾಮದ ನೀರಪಾದೆ ನಿವಾಸಿ ಸುಮತಿ ಭಾಸ್ಕರ ಎಂಬವರ ಮನೆಗೂ ಅಡಿಕೆ ಮರ ಬಿದ್ದು ಚಾವಣಿ ಹಾನಿಗೀಡಾಗಿದ್ದು, ಸಂಗಬೆಟ್ಟು ಗ್ರಾಮದ ಪರನೀರು ನಿವಾಸಿ ನಾಗೇಶ ಧರ್ಣಪ್ಪ ಎಂಬವರ ರೊಟ್ಟಿ ತಯಾರಿಕಾ ಘಟಕದ ಕೊಠಡಿಗೆ ಮರ ಬಿದ್ದು ಹಾನಿಯಾಗಿದೆ. ಕೇಪು ಗ್ರಾಮದ ಚೆಲ್ಲಡ್ಕ ನಿವಾಸಿ ಶಶಿಶೇಖರ ಭಂಡಾರಿ ಎಂಬವರ ಮನೆಗೆ ಗುರುವಾರ ತಡರಾತ್ರಿ ಸಿಡಿಲು ಬಡಿದು ಗೃಹೋಪಯೋಗಿ ವಸ್ತುಗಳು ಭಾಗಶಃ ಹಾನಿಯಾಗಿದೆ. ಕುಳ ಗ್ರಾಮದ ಸೆಕೆಹಿತ್ಲು ನಿವಾಸಿ ರಾಘವ ಎಂಬವರ ಕೋಳಿ ಫಾಮ್ರ್ ಸಂಪೂರ್ಣ ಹಾನಿಗೀಡಾಗಿದೆ. ಇಲ್ಲಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂತರ ಎಂಬಲ್ಲಿ ಎರಡು ಗ್ರಾಮಗಳನ್ನು ಸಂಪಕರ್ಿಸುವ ರಸ್ತೆಗೆ ಮಣ್ಣು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದ್ದು, ಆ ಬಳಿಕ ಗ್ರಾಮ ಪಂಚಾಯಿತಿ ವತಿಯಿಂದ ಮಣ್ಣು ತೆರವುಗೊಳಿಸಿರುವುದಾಗಿ ತಿಳಿಸಿದ್ದಾರೆ.