ಬಂಟ್ವಾಳ: ಸಾಧಾರಣ ಮಳೆ, ನೆರೆ ಇಳಿಮುಖ ಮುಂದುವರಿದ ಮಳೆಹಾನಿ
ಬಂಟ್ವಾಳ: ತಾಲ್ಲೂಕಿನಾದ್ಯಂತ ಗುರುವಾರ ದಿನವಿಡೀ ಸಾಧಾರಣ ಮಳೆಯಾಗಿದ್ದು, ನೇತ್ರಾವತಿ ನದಿಯಲ್ಲಿ ಬೆಳಿಗ್ಗೆ 7.9 ಎತ್ತರಕ್ಕೆ ರಭಸದಿಂದ ಹರಿಯತ್ತಿದ್ದ ನೆರೆ ನೀರಿನ ಮಟ್ಟ ಸಂಜೆಯಾಗುತ್ತಿದ್ದಂತೆಯೇ 7.3 ಮೀಟರಿಗೆ ಇಳಿಮುಖಗೊಂಡಿದೆ. ಪಾಣೆಮಂಗಳೂರು ಸಮೀಪದ ಆಲಡ್ಕ ತಗ್ಗು ಪ್ರದೇಶಗಳ 10 ಮನೆ ಸ್ಥಳಾಂತರಗೊಳಿಸಲಾಗಿದ್ದು, ಕೊಳ್ನಾಡು ಗ್ರಾಮದ ಸುರಿಬೈಲು-ಖಂಡಿಗ ಸಂಪಕರ್ಿಸುವ ಕಿರು ಸೇತುವೆಯಡಿ ಮೋರಿ ಕೊಚ್ಚಿ ಹೋದ ಪರಿಣಾಮ ಸೇತುವೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.

ಮಳೆಹಾನಿ: ಮಾಣಿ ಗ್ರಾಮದ ಕೊಡಾಜೆ-ಕೋಚಪಲ್ಕೆ ನಿವಾಸಿ ಸಂಜೀವ ಮೇರ ಎಂಬವರ ಶಿಥಿಲಗೊಂಡ ಮನೆ ಬುಧವಾರ ರಾತ್ರಿ ಸುರಿದ ಮಳೆಗೆ ಧರೆಗೆ ಉರುಳಿ ಬಿದ್ದು ಸಂಪೂರ್ಣ ಹಾನಿಗೀಡಾಗಿದೆ. ಸಂಜೀವ ಅವರು ಸಂಬಂಧಿಕರ ಮನೆಗೆ ತೆರಳಿದ್ದ ಪರಿಣಾಮ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಾಳ್ತಿಲ ಗ್ರಾಮದ ಪಳನೀರು ಎಂಬಲ್ಲಿ ಕೇಶವ ಕೊಟ್ಟಾರಿ ಮನೆಗೆ ಗಾಳಿ ಮಳೆಯಿಂದ ಹಾನಿಯಾಗಿದೆ. ಕಾವಳಮೂಡೂರು ಗ್ರಾಮದ ಮಧ್ವ ನಿವಾಸಿ ಮೀನಾಕ್ಷಿ ಎಂಬವರ ಶೌಚಗೃಹ ಸಂಪೂರ್ಣ ಹಾನಿಗೀಡಾಗಿದೆ. ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ನಿವಾಸಿ ನಿಜಾಮುದ್ದೀನ್ ಎಂಬವರ ಮನೆಗೆ ಭಾಗಶಃ ಹಾನಿಯಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.