ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010ರ ಮೇ 22 ರಂದು ನಡೆದ ಭೀಕರ ವಿಮಾನ ಅಪಘಾತದಲ್ಲಿ ದುರಂತ ಸಾವನ್ನಪ್ಪಿದವರ ನೆನಪಿಗಾಗಿ ಕೂಳೂರು ಸೇತುವೆ ಮತ್ತು ತಣ್ಣೀರುಬಾವಿ ನಡುವಿನ ಪ್ರದೇಶದಲ್ಲಿ ಸ್ಮಾರಕ ನಿರ್ಮಾಣವಾಗಲಿದೆ ಎಂದು ಮಂಗಳೂರು ಜಿಲ್ಲಾಧಿಕಾರಿ ಇಬ್ರಾಹಿಂ ತಿಳಿಸಿದರು. ಬುಧವಾರ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

ರಾಜ್ಯ ಸರ್ಕಾರ ಸಹಕಾರದಲ್ಲಿ 43 ಸೆಂಟ್ಸ್ ಜಾಗದಲ್ಲಿ ಎರ್ ಇಂಡಿಯಾ , ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಎನ್ಎಮ್‌ಪಿಟಿ ಸಹಯೋಗದಲ್ಲಿ ಸ್ಮಾರಕ ನಿರ್ಮಿಸಿ ನಂತರ ಮಂಗಳೂರು ಮಹಾನಗರ ಪಾಲಿಕೆಗೆ ನಿರ್ವಹಣೆಯ ಜವಾಬ್ಧಾರಿ ನೀಡಲಾಗುವುದು ಎಂದರು.
ಪಾರ್ಕ್ ನಡುವೆ ಬೋಯಿಂಗ್ 737-800 ವಿಮಾನವನ್ನು ಇಡಲಾಗುತ್ತಿದೆ.
ವಿಮಾನ ನಿಲ್ದಾಣದ ನಿರ್ಗಮನ ದಾರಿಯ ಬಳಿಯೆ ಸ್ಮಾರಕ ನಿರ್ಮಸಲು ಉದ್ದೇಶಿಸಲಾಗಿತ್ತು, ಆದರೆ ದುರಂತದಲ್ಲಿ ಮಡಿದ ವರ ಕುಟುಂಬಿಕರು ಸೇರಿದಂತೆ ಹಲವರು ಘೋರ ದುರಂತದ ನೆನಪು ಮಾಡುವುದು ಬೇಡ ಎಂದು ಮನವಿ ಮಾಡಿದುದರಿಂದ ಅಲ್ಲಿ ನಿರ್ಮಾಣ ಮಾಡುತ್ತಿಲ್ಲ ಎಂದು ಇಬ್ರಾಹಿಂ ಹೇಳಿದರು.
ಮಂಗಳೂರು ವಿಮಾನ ನಿಲ್ದಾಣ ನಿರ್ದೇಶಕ ಜೆ.ಟಿ.ರಾಧಾಕೃಷ್ಣ ,ಸಹಾಯಕ ಪೊಲೀಸ್ ಕಮಿಷನರ್ ಉದಯ್ ನಾಯಕ್, ಮಾಜಿ ಮಂಗಳೂರು ವಿಮಾನ ನಿಲ್ದಾಣ ನಿರ್ದೇಶಕ ಎಂ.ವಾಸುದೇವ ರಾವ್ ಅವರು ಸಭೆಯಲ್ಲಿ ಹಾಜರಿದ್ದರು.
