ಅಂಚೆ ಇಲಾಖೆಯಿಂದ ಜನರ ಬಳಿ ತೆರಳಿ ಸೇವೆ: ಅಂಚೆ ಅಧೀಕ್ಷಕ ಎಂ.ಸುಧಾಕರ್ ಮಲ್ಯ
ಬಂಟ್ವಾಳ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸೇವೆಯನ್ನು ತಲುಪಿಸಬೇಕು ಎನ್ನುವ ನಿಟ್ಟಿನಲ್ಲಿ ಅಂಚೆ ಇಲಾಖೆಯು ಪ್ರಸ್ತುತ ದಿನಗಳಲ್ಲಿ ಜನತೆಯ ಬಳಿಗೆ ತೆರಳಿ ಸೇವೆಯನ್ನು ನೀಡುತ್ತಿದ್ದು, ಆಧುನಿಕ ತಂತ್ರಜ್ಞಾನದ ಮೂಲಕ ಬ್ಯಾಂಕಿಂಗ್ ಸೇವೆಯನ್ನೂ ನೀಡುತ್ತಿದೆ. ಆರೋಗ್ಯ ಕ್ಷೇತ್ರದ ಹೆಮ್ಮೆಯ ಸಂಸ್ಥೆ ಸೇವಾಂಜಲಿ ನಮಗೆ ಸಹಕಾರ ನೀಡಿದೆ ಎಂದು ಅಂಚೆ ಇಲಾಖೆ ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಎಂ.ಸುಧಾಕರ್ ಮಲ್ಯ ಹೇಳಿದರು.

ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಇದರ ಸಹಯೋಗದೊಂದಿಗೆ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ಭಾನುವಾರ ನಡೆದ ೧೨೮ ರಕ್ತದಾನ ಶಿಬಿರ ಹಾಗೂ ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗ ಇದರ ಸಹಯೋಗದಲ್ಲಿ “ಅಂಚೆ ಜನ ಸಂಪರ್ಕ ಅಭಿಯಾನ” ಆಧಾರ್ ಕಾರ್ಡ್ ನೋಂದಣಿ ಮತ್ತು ತಿದ್ದುಪಡಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಇದರ ದ.ಕ. ಜಿಲ್ಲಾ ಕೋಶಾಧಿಕಾರಿ ಕೆ. ಮೋಹನ್ ಶೆಟ್ಟಿ ಮಾತನಾಡಿ ರಕ್ತದಾನ ಮಾಡುವುದರಿಂದ ನಮ್ಮಉಸಿರು ನಿಂತರೂ ಮತ್ತೊಬ್ಬರ ದೇಹದಲ್ಲಿ ನಿರಂತರವಾಗಿ ನಮ್ಮ ರಕ್ತ ಹರಿದಾಡುತ್ತಿರುತ್ತದೆ. ಹೆಚ್ಚು ಹೆಚ್ಚು ಜನರು ರಕ್ತ ನೀಡಿದಾಗ ರಕ್ತದ ಕೊರತೆ ಬಗೆ ಹರಿಯಲಿದೆ. ರಕ್ತದಾನಕ್ಕಿಂತ ದೊಡ್ಡ ದಾನವಿಲ್ಲ, ರಕ್ತ ಅನೇಕ ಜನರಿಗೆ ಅಗತ್ಯವಿದೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಜಿಲ್ಲಾ ಮಾಜಿ ಗವರ್ನರ್ ಪ್ರಕಾಶ್ ಕಾರಂತ್, ಉಪ ಅಂಚೆ ಅಧೀಕ್ಷಕ ಪಿ.ದಿನೇಶ್, ಅಂಚೆ ನಿರೀಕ್ಷಕ ಪ್ರದೀಪ್ ಭಂಡಾರಿ, ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೇತನ್, ಪ್ರವೀಣ್ ಕಬೇಲ, ಜಯರಾಜ್ ಕರ್ಕೆರ ಮಂಟಮೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇವದಾಸ ಶೆಟ್ಟಿ ಕೊಡ್ಮಾಣ್, ಪದ್ಮನಾಭ ಶೆಟ್ಟಿ ಪುಂಚಮೆ, ಸುಕುಮಾರ್ ಅರ್ಕುಳ, ಪ್ರಶಾಂತ್ ತುಂಬೆ, ಕೃಷ್ಣ ತುಪ್ಪೆಕಲ್ಲು, ಸುಧಾಕರ ಕುಂಪಣಮಜಲು, ಪ್ರಕಾಶ್ ಕಿದೆಬೆಟ್ಟು, ಸುಕೇಶ್ ಶೆಟ್ಟಿ ತೇವು, ಉಮೇಶ್ ಕೊಳಂಬೆ, ಜಗದೀಶ್ ಕಡೆಗೋಳಿ, ಜಗನ್ನಾಥ ಸಾಲ್ಯಾನ್ ಹಾಜರಿದ್ದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಜಿ.ಕತ್ತಲ್ ಸಾರ್ ಕಾರ್ಯಕ್ರಮ ನಿರೂಪಿಸಿದರು.
ರಕ್ತದಾನ ಶಿಬಿರದಲ್ಲಿ ಒಟ್ಟು ೬೨ ಯುನಿಟ್ ರಕ್ತ ಸಂಗ್ರಹವಾಯಿತು. ಆಧಾರ್ ನಿಂದಾಣಿ ಹಾಗೂ ತಿದ್ದುಪಡಿ ಶಿಬಿರದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.