ಬಂಟ್ವಾಳ: ಹೆದ್ದಾರಿ ಬದಿ ಇಳಿಜಾರು ಮಣ್ಣಿನ ಸಂರಕ್ಷಣೆಗೆ ‘ತೆಂಗಿನ ನಾರು ಮ್ಯಾಟಿನಲ್ಲಿ ಹುಲ್ಲು ಬೆಳೆ’
ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ರಾಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಈಗಾಗಲೇ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಳಿಸಿದ ಹೆದ್ದಾರಿಯ ಇಕ್ಕೆಲಗಳಲ್ಲಿ ತುಂಬಿದ ಮಣ್ಣು ಮಳೆಗೆ ಸವೆದು ಹೋಗದಂತೆ ತಡೆಯಲು ಗುತ್ತಿಗೆ ಸಂಸ್ಥೆ ಹುಲ್ಲು ಬೆಳೆಸುವ ಕಾರ್ಯಕ್ಕೆ ಮುಂದಾಗಿದೆ.
ಬಿ.ಸಿ.ರೋಡು-ಪೆರಿಯಶಾಂತಿ ಮಧ್ಯೆ ಸುಮಾರು ೪೮.೫೦ ಕಿ.ಮೀ. ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿರುವ ಕೆ ಎನ್ ಆರ್ ಸಂಸ್ಥೆ ಹೆದ್ದಾರಿ ಬದಿ ಮಣ್ಣು ತುಂಬಿಸಿದ ಇಳಿಜಾರು ಪ್ರದೇಶಗಳಲ್ಲಿ ಮಣ್ಣು ಸವೆದು ಹೋಗದಂತೆ ಈ ತಂತ್ರಗಾರಿಕೆ ಬಳಸುತ್ತಿದೆ. ಸುಮಾರು ೨೦ ಕಡೆಗಳಲ್ಲಿ ತೆಂಗಿನ ನಾರು ಮ್ಯಾಟ್ ಅಳವಡಿಸಿ ರಸ್ತೆಯ ಎರಡೂ ಬದಿ ಇಳಿಜಾರು ಪ್ರದೇಶದಲ್ಲಿ ಹುಲ್ಲು ನೆಡುವ ಕಾಯಕದಲ್ಲಿ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ.
ಬಿ.ಸಿ.ರೋಡು ಮುಖ್ಯ ವೃತ್ತದಿಂದ ಪಾಣೆಮಂಗಳೂರು ತನಕ ಗರಿಷ್ಟ ಪ್ರಮಾಣದಲ್ಲಿ ರಸ್ತೆಯ ಎರಡೂ ಬದಿ ಮಣ್ಣು ಹಾಕಿ ರಸ್ತೆ ಎತ್ತರಗೊಳಿಸಲಾಗಿದ್ದು, ಈ ಪ್ರದೇಶದಲ್ಲಿ ಹುಲ್ಲು ನೆಡುವ ಕಾಯಕ ಆರಂಭಗೊAಡಿದೆ. ಇದಕ್ಕಾಗಿ ತಮಿಳುನಾಡು ಮೂಲದ ಪ್ರತ್ಯೇಕ ಗುತ್ತಿಗೆ ಸಂಸ್ಥೆ ಅಲ್ಲಿನ ಕಾರ್ಮಿಕರನ್ನು ಕರೆತಂದು ಕಾಮಗಾರಿ ಪೂರ್ಣಗೊಂಡ ಸ್ಥಳಗಳಲ್ಲಿ ರಸ್ತೆಯ ಎರಡೂ ಬದಿ ತೆಂಗಿನ ನಾರು ಮ್ಯಾಟ್ ಅಳವಡಿಸಿ ಬಳಿಕ ಸಾಲಾಗಿ ಹುಲ್ಲು ನೆಡುವ ಕಾರ್ಯ ನಡೆಸುತ್ತಿದ್ದು, ಇಂತಹ ರಸ್ತೆ ಬದಿ ವಾಹನ ಕೆಳಗೆ ಉರುಳಿ ಬೀಳದಂತೆ ತಡೆಯಲು ಕಬ್ಬಿಣದ ತಡೆಬೇಲಿಯೂ ಅಳವಡಿಸಲಾಗಿದೆ.
ಮಳೆಗಾಲದಲ್ಲಿ ಈ ಹುಲ್ಲು ಹೆಚ್ಚಿನ ಎತ್ತರಕ್ಕೆ ಬೆಳೆದು ಬೇರುಗಳು ಕೂಡ ವಿಸ್ತಾರವಾಗಿ ಹರಡಿ ಮಣ್ಣನ್ನು ಹಿಡಿದಿಟ್ಟುಕೊಳ್ಳುತ್ತದೆ. ಮಾತ್ರವಲ್ಲದೆ ಹೆದ್ದಾರಿಗೆ ಬಳಸಿದ ಮಣ್ಣಿನ ರಕ್ಷಣೆ ಜೊತೆಗೆ ಹೆದ್ದಾರಿ ಬದಿ ಸೌಂದರ್ಯವೂ ವೃದ್ಧಿಸಲಿದೆ ಎನ್ನುತ್ತಾರೆ ಸ್ಥಳೀಯ ವರ್ತಕರು.
ಈ ಗುತ್ತಿಗೆ ಸಂಸ್ಥೆಯು ಒಟ್ಟು ೧೦ ವರ್ಷಗಳ ಕಾಲ ಇದರ ನಿರ್ವಹಣೆ ಮಾಡಲಿದೆ. ಹುಲ್ಲು ಎತ್ತರಕ್ಕೆ ಬೆಳೆದಾಗ ಅದನ್ನು ಕಟಾವು ಮಾಡಿ ಮತ್ತೆ ಅದನ್ನು ಸೊಂಪಾಗಿ ಬೆಳೆಯುವಂತೆ ನಿರ್ವಹಣೆ ಮಾಡುವ ಜವಾಬ್ದಾರಿಯೂ ಅವರ ಮೇಲಿದೆ ಎಂದು ಕೆ ಎನ್ ಆರ್ ಸಂಸ್ಥೆ ಸಾರ್ವಜನಿಕ ಸಂಪರ್ಕ ಅಧಿಕಾರಿ ನಂದಕುಮಾರ್ ತಿಳಿಸಿದ್ದಾರೆ.
ಮೋಹನ್ ಕೆ.ಶ್ರೀಯಾನ್ ರಾಯಿ