Published On: Fri, Jun 28th, 2024

ಗುರುಪುರ ಪಂಚಾಯತ್‌ನಲ್ಲಿ ಪ್ರಥಮ ಹಂತದ ಗ್ರಾಮಸಭೆ

ಕೈಕಂಬ : ಮೂಳೂರು ಮತ್ತು ಅಡ್ಡೂರು ಗ್ರಾಮಗಳನ್ನೊಳಗೊಂಡ ಗುರುಪುರ ಗ್ರಾಮ ಪಂಚಾಯತ್‌ನ ೨೦೨೪-೨೫ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷೆ ಸಫಾರ ಮದಕ ಅವರ ಅಧ್ಯಕ್ಷತೆಯಲ್ಲಿ ಜೂ. ೨೮ರಂದು ನಡೆಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಂಕಜಾ ಶೆಟ್ಟಿ ಅವರು ಸ್ವಾಗತಿಸಿದರು. ಪಂಚಾಯತ್ ಸಿಬ್ಬಂದಿ ಇರ್ಶಾದ್ ಅವರು ಹಿಂದಿನ ಗ್ರಾಮಸಭೆಯ ನಡವಳಿ ಓದಿದರು.ಗ್ರಾಮಸಭೆ ಬಗ್ಗೆ ಮುಂಚಿತವಾಗಿ ಸಾಕಷ್ಟು ಪ್ರಚಾರ ನಡೆಸಿಲ್ಲ ಎಂದು ಸಾದಿಕ್ ಅಡ್ಡೂರು ಅವರು ಸಭೆಯ ಆರಂಭದಲ್ಲೇ ಗಮನಸೆಳೆದಾಗ, ಪಿಡಿಒ ಅವರು ಸ್ಪಷ್ಟನೆ ನೀಡಿ ಪತ್ರಿಕೆ, ಬ್ಯಾನರ್‌ಗಳ ಮೂಲಕ ಪ್ರಚಾರ ಮಾಡಲಾಗಿದೆ ಎಂದು ಪಿಡಿಒ ಉತ್ತರಿಸಿದರು.

ರಾಷ್ಟ್ರೀಯ ಹೆದ್ದಾರಿ(ಎನ್‌ಎಚ್) ೧೬೯ರ ಚತುಷ್ಪಥ ವಿಸ್ತರಣೆ ಕಾಮಗಾರಿ ಹಿನ್ನೆಲೆಯಲ್ಲಿ ಮೂಳೂರು ಗ್ರಾಮದ ವಿಕಾಸನಗರ ಮತ್ತು ಗುರುಪುರ ಕೈಕಂಬದಲ್ಲಿ ಮಳೆಯಿಂದ ಉಂಟಾಗಿರುವ ತೊಂದರೆಗಳ ಬಗ್ಗೆ ಗ್ರಾಮಸ್ಥರು ಗಮನಸೆಳೆದರು. ಚರಂಡಿ ವ್ಯವಸ್ಥೆ ಮಾಡಿದ ಬಳಿಕ, ರಸ್ತೆ ಅಗೆಯುವ ಕಾಮಗಾರಿ ನಡೆಸಬೇಕು. ಎನ್‌ಎಚ್ ಗುತ್ತಿಗೆ ಕಂಪೆನಿಯು ಚರಂಡಿ ಸಹಿತ ರಸ್ತೆ ಅಗೆದಿರುವುದರಿಂದ ಮಳೆಗಾಲದಲ್ಲಿ ಸಣ್ಣ ಮಳೆಗೆ ಹೆದ್ದಾರಿಯ ಕೆಲವು ಕಡೆ ಜಲಾವೃತಗೊಂಡಿದೆ. ಕೆಲವೆಡೆ ಸಂಪರ್ಕವೇ ಕಡಿದು ಹೋಗಿದೆ. ಇದಕ್ಕೆ ಪರಿಹಾರ ಇಲ್ಲವೇ ಎಂದು ಅಡ್ಡೂರಿನ ಟಿ. ಹನೀಫ್, ಸಿದ್ದಿಕ್ ಅಡ್ಡೂರು ಹಾಗೂ ಇತರರು ಪ್ರಶ್ನಿಸಿದರು.

ಎನ್‌ಎಚ್ ಕನ್ಸಲ್ಟೆಂಟ್ ಸಾತ್ವಿಕ್ ಮಾತನಾಡಿ, ಮಳೆಗಾಲದಲ್ಲಿ ಹೆದ್ದಾರಿ ಕಾಮಗಾರಿ ಪ್ರದೇಶಗಳಲ್ಲಿ ಸಮಸ್ಯೆ ಉಂಟಾಗುವುದು ಸಹಜ. ಮಳೆ ತಗ್ಗಿದ ಬಳಿಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತೇವೆ. ಹೆದ್ದಾರಿ ಕಾಮಗಾರಿಯಲ್ಲಿ ತಡೆಗೋಡೆ ಮತ್ತು ಚರಂಡಿಗೆ ಆದ್ಯತೆ ನೀಡಲಾಗುತ್ತದೆ ಎಂದು ಉತ್ತರಿಸಿದರು.

ಸರ್ಕಾರದ ಜಲ್ ಜೀವನ್ ಮಿಷನ್(ಜೆಜೆಎಂ) ಕುಡಿಯುವ ನೀರಿನ ಯೋಜನೆಯಿಂದ ಅಡ್ಡೂರು ಪ್ರದೇಶಕ್ಕೆ ಹೇಗೆ ನೀರು ಬರುತ್ತದೆ ಎಂದು ಪ್ರಶ್ನಿಸಿದ ಅಡ್ಡೂರು ಗ್ರಾಮಸ್ಥರು, ಪ್ರಸಕ್ತ ಕಲುಷಿತ ನೀರು ಪೂರೈಕೆಯಾಗುತ್ತದೆ, ಕುಡಿಯುವ ನೀರಿಗೆ ಸೂಕ್ತ ವ್ಯವಸ್ಥೆ ಇಲ್ಲ ಎಂದರು.ನಾಗರಿಕರ ಸಮಸ್ಯೆಗೆ ಜೆಜೆಎಂ ಕಿರಿಯ ಇಂಜಿನಿಯರ್ ಆನಂದ್ ಗಾಣಿಗ ಹಾಗೂ ಯೋಜನೆಯ ಕೈಗೆತ್ತಿಕೊಂಡಿರುವ ಮೊಗ್ರೋಡಿ ಕಂಪೆನಿಯ ಇಂಜಿನಿಯರ್ ನಿಶಿತ್ ಉತ್ತರಿಸುತ್ತಲೇ, ಗ್ರಾಮಸಭೆಯಲ್ಲಿ ಭಾರೀ ಗದ್ದಲ ಉಂಟಾಯಿತು. ಪರಿಸರದ ನಾಗರಿಕರ ಸಮಸ್ಯೆ ಅರಿತಿರುವ ಇಲಾಖಾ ಅಧಿಕಾರಿಗಳು ಗ್ರಾಮಸಭೆಗೆ ಬರಲಿ ಎಂದು ಹನೀಫ್ ಹಾಗೂ ಇತರರು ಆಗ್ರಹಿಸಿದರು.

ಖಾಸಗಿ(ಪಟ್ಟಾ) ಜಾಗದಲ್ಲಿರುವ ಮರಗಳನ್ನು ಪರವಾನಿಗೆ ಪಡೆದು ಖಾಸಗಿಯವರೇ ಕಡಿಯಬಹುದು. ಸರ್ಕಾರಿ ಜಾಗದಲ್ಲಿ ಅಪಾಯ ಉಂಟು ಮಾಡುತ್ತಿರುವ ಮರಗಳನ್ನು ಅರಣ್ಯ ಇಲಾಖೆ ಕಡಿಯುತ್ತದೆ. ಇದಕ್ಕೆ ಸಾರ್ವಜನಿಕರು ದೂರರ್ಜಿ ನೀಡಬೇಕು. ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ ಪಿಡಿಒ ಶೆಟ್ಟಿ ಸ್ಪಷ್ಟನೆ ನೀಡುತ್ತ, ಪಂಚಾಯತ್ ವತಿಯಿಂದ ಮರದ ರೆಂಬೆಕಂಬೆ ಕಡಿಯಲು ಅವಕಾಶವಿದೆಯೇ ಹೊರತು, ಮರ ಕಡಿದು ಹಾಕಲು ಅವಕಾಶವೂ ಇಲ್ಲ, ಅನುದಾನವೂ ಇಲ್ಲ. ಅದು ಅರಣ್ಯ ಇಲಾಖೆಗೆ ಸಂಬಂಧಿಸಿದ ವಿಷಯ ಎಂದರು.

ಮೆಸ್ಕಾಂ ಸಹಾಯಕ ಇಂಜಿನಿಯರ್ ದೇವಿಪ್ರಸಾದ್, ಅರಣ್ಯ ಇಲಾಖೆಯ ಅಧಿಕಾರಿ ಕ್ಯಾತಲಿಂಗ, ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತ್‌ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾಲಿನಿ, ಬಜ್ಪೆ ಠಾಣೆಯ ಪಿಎಸ್‌ಐ ಲಕ್ಷ್ಮಣ್ , ಗುರುಪುರ ಗ್ರಾಮಕರಣಿಕೆ ಶಿಲ್ಪಾ, ಕೈಕಂಬ ಕೃಷಿ ಕೇಂದ್ರದ ಅಧಿಕಾರಿ ಹಾಗೂ ಇತರ ಇಲಾಖಾಧಿಕಾರಿಗಳು ತಮ್ಮ ಇಲಾಖೆಗಳ ಹೊಸ ನಿಯಮಗಳ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿ, ಯೋಜನೆಗಳ ಫಲಾನುಭವಿಗಳಾಗುವಂತೆ ಮನವಿ ಮಾಡಿಕೊಂಡರು.

ನೋಡೆಲ್ ಅಧಿಕಾರಿಯಾಗಿ ತಾಲೂಕು ವಿಸ್ತರಣಾಧಿಕಾರಿ(ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ) ಮೊಹಮ್ಮದ್ ಫಾರೂಕ್ ಅವರು ಕಾರ್ಯ ನಿರ್ವಹಿಸಿದರು. ಪಂಚಾಯತ್ ಉಪಾಧ್ಯಕ್ಷ ದಾವೂದ್ ಬಂಗ್ಲೆಗುಡ್ಡೆ, ಪಂಚಾಯತ್‌ನ ಸದಸ್ಯರು, ಕಾರ್ಯದರ್ಶಿ ಅಶೋಕ್, ಸಿಬ್ಬಂದಿ ವರ್ಗ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ವರ್ಗ, ಗ್ರಾಮಸ್ಥರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter