Published On: Thu, Jun 13th, 2024

ಮಳೆ ಹಾಗೂ ನೆರೆಯಿಂದ ಜೀವ ಹಾನಿಯಾಗದಂತೆ ಜಾಗೃತರಾಗಿರಿ,ತಂಡವಾಗಿ ಕಾರ್ಯನಿರ್ವಹಿಸಿ : ಶಾಸಕ ನಾಯ್ಕ್ ಸೂಚನೆ

ಬಂಟ್ವಾಳ: ತಾಲೂಕಿನಲ್ಲಿ ಮಳೆ ಹಾಗೂ ನೆರೆಯಿಂದ ಜೀವ ಹಾನಿಯಾಗದಂತೆ ಅಧಿಕಾರಿಗಳು ಸದಾ ಜಾಗೃತರಿರಬೇಕು,ಸಾರ್ವಜನಿಕರಿಂದ ದೂರುಗಳು ಬಾರದಂತೆ ತಂಡವಾಗಿ ಕಾರ್ಯನಿರ್ವಹಿಸುವಂತೆ  ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸೂಚಿಸಿದರು.

ಗುರುವಾರ ಬಂಟ್ವಾಳ ತಾ.ಪಂ.ನ‌ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಕರೆದ ಮಳೆ ವಿಪತ್ತು ನಿರ್ವಹಣಾ ಸಮಿತಿ ಸಭೆಯ   ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ,ಮಳೆ ಹಾನಿ ಅಥವಾ ಇನ್ನಿತರ ಅನಾಹುತಗಳ ಬಗ್ಗೆ ಪಿಡಿಒ ಅಥವಾ ಕೆಳಹಂತದ ಅಧಿಕಾರಿಗಳು ನೀಡಿದ ವರದಿಯಲ್ಲಿ ಲೋಪವಿದ್ದರೆ ತಹಶೀಲ್ದಾರರು ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಅದು ಬಿಟ್ಟು ಮೂರನೇ ವ್ಯಕ್ತಿ ಹೇಳಿದಾಕ್ಷಣ ಅದನ್ನು ಫಲಾನುಭವಿಗಳ ಆಯ್ಕೆ ಅಥವಾ ಸವಲತ್ತುಗಳನ್ನು ತಡೆ ಹಿಡಿಯುವುದು ಯಾವ ನೀತಿ ಇಂತಹ ಬ್ಲ್ಯಾಕ್ ಮೇಲ್ ಗೆ ಅಧಿಕಾರಿಗಳು ಹೆದರಬೇಕಾಗಿಲ್ಲ ಎಂದು ಸೂಚ್ಯವಾಗಿ ತಿಳಿಸಿದರು.


  ದುಸ್ಥಿತಿಯಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸುರಕ್ಷತೆ ಕ್ರಮ ಕೈಗೊಳ್ಳಬೇಕು ಅಗತ್ಯವಿದ್ದರೆ ಸ್ಥಳೀಯ ಸರಕಾರ ಪ್ರಾಥಮಿಕ ಶಾಲಾ ಕೊಠಡಿಯಲ್ಲಿ ಅಂಗನವಾಡಿ ನಡೆಸುವಂತೆ ಶಾಸಕರು‌ ಸಲಹೆ ನೀಡದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಡಿಪಿಒ ಅಂಗನವಾಡಿ‌ ಮಕ್ಕಳನ್ನು ಸರಕಾರಿ‌ ಪ್ರಾಥಮಿಕ ಶಾಲೆಗೆ ಸ್ಥಳಾಂತರಕ್ಕೆ ಶಿಕ್ಷಣ ಇಲಾಖೆ ಅನುಮತಿ ನೀಡುವುದಿಲ್ಲ ಎಂದು‌ ಸಭೆಗೆ ತಿಳಿಸಿದಾಗ ಗರಂ ಆದ ಶಾಸಕ ರಾಜೇಶ್ ನಾಯ್ಕ್ ಅಂಗನವಾಡಿ ಮಕ್ಕಳನ್ನು ಪ್ರಾಥಮಿಕ ಶಾಲಾ ಮಕ್ಕಳ ಜೊತೆ ಬೆರೆಯಲು ಬಿಟ್ಟಾಗ ಮಕ್ಕಳ ಮಾನಸಿಕ ಮತ್ತು ಬೌದ್ದಿಕಬೆಳವಣಿಗೆ ಗೆ ಸಾಧ್ಯವಾಗುತ್ತದೆ. ಒಂದು ವೇಳೆ ಶಿಕ್ಷಣ ಇಲಾಖೆ ಅವಕಾಶ ನೀಡದಿದ್ದರೆ ಅಂತಹ ಅಧಿಕಾರಿ ಮನೆಯಲ್ಲಿಯೇ ಅಂಗನವಾಡಿ‌ ತೆರೆಯಲಿ,ವಾಸ್ತವ  ಅರಿತುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಬಿಟ್ಟು ಕಚೇರಿಯಲ್ಲಿ ಕುಳಿತು ಅದೇಶ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.


ಮಳೆಗಾಲದಲ್ಲಿ ವಿಷಜಂತು ಕಡಿತಕ್ಕೊಳಗಾದರೆ ಅಂತಹ ಸಂದರ್ಭದಲ್ಲಿ ಸೂಕ್ತವಾದ ಚಿಕಿತ್ಸೆಗಾಗಿ ಔಷಧವನ್ನು ದಾಸ್ತಾನು ಮಾಡಿಕೊಂಡಿರಬೇಕು, ತಾಲೂಕಿನಲ್ಲಿಡೆಂಗ್ಯೂ,ಮಲೇರಿಯಾದಂತ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಹೆಚ್ಚಿನ ನಿಗಾವಹಿಸುವಂತೆ ಹಾಗೂ ತಾಲೂಕಿನ ಸ್ವಚ್ಚತೆಗೆ ಮುತುವರ್ಜಿವಹಿಸುವಂತೆ ತಾಲೂಕು ತಾಲೂಕು ಆರೋಗ್ಯಾಧಿಕಾರಿಗೆ ಸೂಚಿಸಿದರು.


ತಾಲೂಕಿನಲ್ಲಿ ಇತ್ತೀಚೆಗೆ ಗಾಳಿ,ಮಳೆಗೆ ಸುಮಾರು 2.74 ಹೇಕ್ಟರ್ ನಲ್ಲಿ ಅಡಿಕೆ ಮರಗಳಿಗೆ ಹಾನಿಯಾಗಿದ್ದು,ಕಳೆದವಾರ ಸುಂಟರಗಾಳಿಯಿಂದ ಇರ್ವತ್ತೂರು ಗ್ರಾಮದಲ್ಲಿ ಅಪಾರಪ್ರಮಾಣದಲ್ಲಿ‌ ಅಡಿಕೆ ಸಹಿತ ತೆಂಗಿನ ಮರಗಳಿಗೆ ಹಾನಿಯಾಗಿದೆ ಎಂದು ತೋಟಗಾರಿಕಾ ಅಧಿಕಾರಿ‌ಸಭೆಗೆ ತಿಳಿಸಿದರು.


ತಾಲೂಕಿನಲ್ಲಿ ಕೃಷಿಯನ್ನು ನಂಬಿ‌ ಜೀವನ ಸಾಗಿಸುವ ಅನೇಕರಿದ್ದು, ಸರಕಾರದ ಅದೇಶ ಎಂದು ಅಧಿಕಾರಿಗಳು ರೈತರ ಮೇಲೆ ಸವಾರಿ ಮಾಡುವುದು ಸರಿಯಲ್ಲ, ಇಲ್ಲಿನ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿಕೊಂಡು ಕಾನೂನಿನ ಚೌಕಟ್ಟಿನಲ್ಲಿ ರೈತರಿಗೂ ಕೃಷಿಯನ್ನು ಅಭಿವೃದ್ದಿ ಮಾಡಲು ಅವಕಾಶ ಕಲ್ಪಿಸಿ ಎಂದರು.


ಅನಾಹಿತ ಸಂಭವಿಸುವ ಮೊದಲೇ‌ ಮುನ್ನೆಚ್ಚರಿಕೆಯಾಗಿ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಈ ಸಂದರ್ಭ ಮೆಸ್ಕಾಂ ಅಧಿಕಾರಿಗಳ ಜೊತೆ ಚರ್ಚಿಸಿ ಜಂಟಿಯಾಗಿ ಕಾರ್ಯನಿರ್ವಹಿಸುವಂತೆ ಶಾಸಕರು ಸಲಹೆ ನೀಡಿದರು.

ಬಾಳ್ತಿಲ ಗ್ರಾ.ಪಂ.ವ್ಯಾಪ್ತಿಯಲ್ಲಿರುವ ನೇತ್ರಾವತಿನದಿಯಿಂದ ಪಂಚಾಯತ್ ಗಮನಕ್ಕೆ ತಾರದೆ ಪುತ್ತೂರು ಕ್ಷೇತ್ರಕ್ಕೆ ನೀರು ಪೂರೈಕೆಗಾಗಿ ಜಾಕ್ ವೆಲ್ ಕಾಮಗಾರಿ ನಡೆಸಲಾಗುತ್ತಿರುವ ಬಗ್ಗೆ ಶಾಸಕ ರಾಜೇಶ್ ನಾಯ್ಕ್ ಅವರು ಅಧಿಕಾರಿಗಳಲ್ಲಿ ಮಾಹಿತಿ ಪಡೆದರು.ಪುತ್ತೂರಿಗೆ ನೀರು ಪೂರೈಸುವುದಕ್ಕೆ ನಮ್ಮ ಅಭ್ಯಂತರವಿಲ್ಲ ಆದರೆ ಇಲ್ಲಿನ  ಗ್ರಾ.ಪಂ.ವ್ಯಾಪ್ತಿ ಹಾಗೂ ನರಿಕೊಂಬು ಗ್ರಾಮಸ್ಥರಿಗೆ  ಮೊದಲ ಅದ್ಯತೆಯಲ್ಲಿ ನೀರು ಪೂರೈಸಿ ಆಬಳಿಕ ಪುತ್ತೂರಿಗೆ ನೀರು ಪೂರೈಸಿ ಎಂದು ತಾಕೀತು ಮಾಡಿದರು.


ಪುರಸಭಾ ವ್ಯಾಪ್ತಿಯ ಕೆಲವೆಡೆಯಲ್ಲಿ  ರಸ್ತೆ ಬದಿಯಲ್ಲಿ ತ್ಯಾಜ್ಯವನ್ನು ಎಸೆಯುವ ಬಗ್ಗೆ ಬಂದಿರುವ  ದೂರಿನ ಹಿನ್ನಲೆಯಲ್ಲಿ ಮುಖ್ಯಾಧಿಕಾರಿಯವರ ಗಮನಸೆಳೆದ ಶಾಸಕ ರಾಜೇಶ್ ನಾಯ್ಕ್ ಕಸ ಎಸೆಯುವ ಸ್ಥಳಗಳಲ್ಲಿ ಎಚ್ಚರಿಕೆಯ ನಾಮಫಲಕ, ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಿ, ಕಸ ಎಸೆಯುವವರ ಪೋಟೋ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಆಗ ಮಾನಮರ್ಯಾದೆ ಇರುವವರು  ಮತ್ತೆ ಕಸ ಎಸೆಯುವುದಕ್ಕೆ ಬರುವುದಿಲ್ಲ. ನಂತರವೂ ಮುಂದುವರಿಸಿದರೆ ಅಂತವರ ಮೇಲೆ ದಂಡ ವಿಧಿಸಿ ಎಂದು ಅವರು ಸೂಚಿಸಿದರು.


ಗ್ರಾಮಪಂಚಾಯತ್  ವ್ಯಾಪ್ತಿಯಲ್ಲು ಸ್ವಚ್ಛತೆಗೆ ಆದ್ಯತೆ ನೀಡಿ ,ಕಸ ವಿಲೇವಾರಿಗೆ ಹೆಚ್ಚಿನ ಗಮನ ಹರಿಸಿ, ತಾಜ್ಯ ಎಸೆಯುವವರ ಮೇಲೆ ಕ್ರಮ ಕೈಗೊಳ್ಳಿ ಎಂದು ಶಾಸಕರು ತಿಳಿಸಿದರು.


  ಶಾಲಾ- ಕಾಲೇಜು ಕ್ಯಾಂಪಸ್ ಹಾಗೂ ಸ್ಥಳೀಯ ಗೂಡಂಗಡಿಗಳಲ್ಲಿ ಗಾಂಜಾ ಮಾರಾಟವಾಗುತ್ತಿರುವುದರ ಬಗ್ಗೆ ಸಾರ್ವಜನಿಕ ದೂರುಗಳಿವೆ,ಈ ಬಗ್ಗೆ ಪೊಲೀಸ್ ‌ಇಲಾಖೆ ಹೆಚ್ಚಿನ ನಿಗಾವಹಿಸಿ ಅಂತಹವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳು ಎಂದು ಶಾಸಕರು ಪೊಲೀಸ್ ಇನ್ಸ್ ಪೆಕ್ಟರ್ ಅವರಿಗೆ ನಿರ್ದೇಶನ ನೀಡಿದರು.
ಈ ಸಂದರ್ಭ ವೇದಿಕೆಯಲ್ಲಿ ತಹಶಿಲ್ದಾರ್ ಅರ್ಚನಾ ಭಟ್, ತಾ.ಪಂ. ಪ್ರಭಾರ ಇ.ಒ ಮಹೇಶ್ ಹೊಳ್ಳ, ಉಪಸ್ಥಿತರಿದ್ದರು.

ಮಂಗಳವಾರ ಪ್ರತ್ಯೇಕಸಭೆಶಾಲಾ ಮಕ್ಕಳಿಗೆ ಬೆಳಗ್ಗೆ  ಮತ್ತು ಸಂಜೆ  ಸಮಯಕ್ಕೆ ಸರಿಯಾಗಿ ಸರಕಾರಿ ಬಸ್ ಗಳ ಅಲಭ್ಯತೆ,ಗ್ರಾಮೀಣ ಭಾಗದಲ್ಲಿ ಬಸ್ ಸಂಚಾರದ ಕೊರತೆ,ಧರ್ಮಸ್ಥಳ ರೂಟ್ ನಲ್ಲಿ ಅಸಮರ್ಪಕ ಸಂಚಾರ ಹೀಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳಿದ್ದು,
ಈ ಕುರಿತಂತೆ ಮಂಗಳವಾರದಂದು ಕೆಎಸ್ ಆರ್ ಟಿಸಿ ಅಧಿಕಾರಿಗಳ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಲು ತೀರ್ಮಾನಿಸಲಾಯಿತು.


ಶಕ್ತಿಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ ಎಂದು ಕೆಎಸ್ ಆರ್ ಟಿಸಿ‌ ಅಧಿಕಾರಿಗಳು ಉತ್ತರಿಸಿದರು.

ಪ್ಲೆಕ್ಸ್ ವಿರುದ್ದ ಕ್ರಮಕ್ಕೆ ಸೂಚನೆ:
ಬಿ.ಸಿ.ರೋಡು ಸಹಿತ ಗ್ರಾ.ಪಂ.ವ್ಯಾಪ್ತಿಯಲ್ಲಿ ಪ್ಲೆಕ್ಸ್ ಗಳ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದ ಶಾಸಕರು ನಿರ್ದಿಷ್ಠ ದಿನಗಳಿಗೆ ಶುಲ್ಕ ವಿಧಿಸಿ ಅಳವಡಿಸಲು ಅನುಮತಿ ನೀಡಬೇಕು,ಬಳಿಕ ಅದನ್ನು ತೆರವುಗೊಳಿಸಬೇಕು, ಪ್ಲೆಕ್ಸ್ ನಲ್ಲಿರುವ ಪ್ರಚೋದನಕಾರಿ ಕಂಟೆಂಟ್ ಗಳಿದ್ದರೆ ಪೊಲೀಸರು ಕಾನೂನು ಕ್ರಮಕೈಗೊಳ್ಳಬೇಕು,ಖುದ್ದು ಶಾಸಕರ ಭಾವಚಿತ್ರವುಳ್ಳ ಪ್ಲಕ್ಸ್ ಗಳಿದ್ದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ಹಾಗೂ ಮುಖ್ಯಾಧಿಕಾರಿಯವರಿಗೆ ಸೂಚಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter