ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ಆಹಾರ ದವಸ ಧಾನ್ಯದ ಕಿಟ್ ವಿತರಣೆ
ಬಂಟ್ವಾಳ: ನಿಕ್ಷಯ್ ಮಿತ್ರ ಕಾರ್ಯಕ್ರಮದ ಮೂಲಕ ಹಂತ ಹಂತವಾಗಿ ಕ್ಷಯ ರೋಗಿಗಳ ಸಂಖ್ಯೆ ಕಡಿಮೆಯಾಗುವುದರ ಜತೆಗೆ ರೋಗಿಗಳು ಸಂಪೂರ್ಣವಾಗಿ ರೋಗಮುಕ್ತರಾಗಿ ಮತ್ತೆ ಈ ಕಾರ್ಯಕ್ರಮವನ್ನು ಆಯೋಜಿಸುವ ಪರಿಸ್ಥಿತಿ ನಿರ್ಮಾಣವಾಗ ಬಾರದು ಎಂದು ಬಂಟ್ವಾಳದ ಸ್ವಣೋದ್ಯಮಿ ನಾಗೇಂದ್ರ ವಿ. ಬಾಳಿಗ ಹೇಳಿದರು.
ಕ್ಷಯ ಮುಕ್ತ ಭಾರತ ನಿರ್ಮಾಣದ ಅಂಗವಾಗಿ ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಬುಧವಾರ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಕ್ಷಯ ರೋಗಿಗಳಿಗೆ ಆಹಾರ ದವಸ ಧಾನ್ಯದ ಕಿಟ್ ವಿತರಿಸಿ ಮಾತನಾಡಿದರು. ಕ್ಷಯ ರೋಗ ಸಂಪೂರ್ಣ ಮುಕ್ತವಾದಾಗ ರೋಗಿಗಳಿಗೆ ನೀಡುವ ಆಹಾರದ ಕಿಟ್‌ನ ಮೊತ್ತವನ್ನು ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ವಿನಿಯೋಗಿಸಲು ಸಾಧ್ಯವಿದೆ. ಎಲ್ಲರೂ ಆರೋಗ್ಯವಂತರಾದಾಗ ಸಮಾಜವೂ ಸ್ವಸ್ಥವಾಗುತ್ತದೆ ಎಂದು ತಿಳಿಸಿದರು. ಮಂಚಿ ಗ್ರಾ.ಪಂ. ಮಾಜಿ ಅಧ್ಯಕ್ಷ ಉಮ್ಮರ್ ಮಂಚಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕೃಷ್ಣ ಕುಮಾರ್ ಪೂಂಜ ಅವರ ನೇತೃತ್ವದಲ್ಲಿ ಸೇವಾಂಜಲಿ ಸಂಸ್ಥೆ ಬಡಜನರ ಕಣ್ಣೊರೆಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಜನರ ಸೇವೆ ಮಾಡುವ ಅವಕಾಶವನ್ನು ದೇವರು ಅವರಿಗೆ ಕರುಣಿಸಿದ್ದು ಅವರ ಸೇವಾ ಕ್ಷೇತ್ರದ ಸಾಧನೆ ಶ್ಲಾಘನೀಯವಾದುದು ಎಂದು ತಿಳಿಸಿದರು.
ಸೇವಾಂಜಲಿ ಪ್ರತಿಷ್ಠಾನದ ಅಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಾಸ್ತವಿಕವಾಗಿ ಮಾತನಾಡಿ ದಾನಿಗಳ ಸಹಕಾರದಿಂದ ನಿರಂತರವಾಗಿ ಆಹಾರದ ಕಿಟ್ ವಿತರಿಸುವ ಕಾರ್ಯಕ್ರಮ ನಡೆದು ಕೊಂಡು ಬರುತ್ತಿದೆ. ಔಷಧಿಯ ಜೊತೆಗೆ ಪೌಷ್ಠಿಕ ಆಹಾರವನ್ನು ಸೇವಿಸಿದಾಗ ಮಾತ್ರ ಕ್ಷಯ ರೋಗ ಮುಕ್ತರಾಗಲು ಸಾಧ್ಯವಿದೆ ಎಂದರು.
ಬಿ.ಸಿ.ರೋಡಿನ ದಸ್ತಾವೇಜು ಬರಹಗಾರ ಟಿ.ಗಣೇಶ್ ರಾವ್ ಟ್ರಸ್ಟಿಗಳಾದ ತಾರನಾಥ ಕೊಟ್ಟಾರಿ, ಭಾಸ್ಕರ ಚೌಟ, ಆನಂದ ಆಳ್ವ ಗರೋಡಿ ವೇದಿಕೆಯಲ್ಲಿ ಭಾಗವಹಿಸಿದ್ದರು. ಪ್ರಮುಖರಾದ
ಸುರೇಶ್ ರೈ ಪೆಲಪಾಡಿ, ಪ್ರಕಾಶ್ ಕೆ. ಫರಂಗಿಪೇಟೆ, ಕೃಷ್ಣ ತುಪ್ಪೆಕಲ್ಲು, ನಾರಾಯಣ ಬಡ್ಡೂರು
ಉಮೇಶ್ ಸೇಮಿತ, ರಾಜೇಶ್ ಕಬೇಲ, ಪ್ರಶಾಂತ್ ತುಂಬೆ, ವಿಕ್ರಂ ಬರ್ಕೆ, ಕೇಶವ, ಉಮಾ ಚಂದ್ರಶೇರ ಭಾಗವಹಿಸಿದ್ದರು. ಟ್ರಸ್ಟಿ ಕೊಡ್ಮಾನ್ ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.