ಸುರತ್ಕಲ್: ಇಲ್ಲಿಗೆ ಸಮೀಪದ ಕುಳಾಯಿ ಬಗ್ಗುಂಡಿ ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು, ಇದರಿಂದ ಬಗ್ಗುಂಡಿ ಮೀನು ಹಿಡಿಯುವ ಜಾತ್ರೆಗೆ ತೆರೆ ಬಿದ್ದಿತ್ತು. ಕೆರೆಯ ಹೂಳೆತ್ತುವಂತೆನಾಗರಿಕರು ಸಂಬಂಧಪಟ್ಟವರನ್ನು ಒತ್ತಾಯಿಸುತ್ತಲೇ ಇದ್ದರು. ಈ ಬಗ್ಗೆ ಇಲಾಖೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳೇ ಹೂಳೆತ್ತುವ ಕಾರ್ಯವನ್ನು ಆರಂಭಿಸಿವೆ.
ಕುಳಾಯಿ ನಾಗರಿಕ ಸಮಿತಿ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಮುಂದಾಳತ್ವದಲ್ಲಿ ಆದಿತ್ಯವಾರದಿಂದ ಹೂಳೆತ್ತಲಾಗುತ್ತಿದೆ. ಆದಿತ್ಯವಾರ ಸ್ಥಳೀಯರೂ ಶ್ರಮದಾನದಲ್ಲಿ ಪಾಲ್ಗೊಂಡರು. ಜೆಸಿಬಿ ಬಳಸಿ ಹೂಳನ್ನು ಮೇಲಕ್ಕೆತ್ತಿ ಕೆರೆಯ ನೀರನ್ನು ಶುದ್ಧಗೊಳಿಸಲಾಗುತ್ತಿದೆ. ಬಗ್ಗುಂಡಿ ಕೆರೆಯಲ್ಲಿ ನಡೆಯುವ ಮೀನು ಹಿಡಿಯುವ ಜಾತ್ರೆಗೆ ಅದರದ್ದೇ ಆದ ಇತಿಹಾಸವಿದ್ದು, ಸಾವಿರಾರು ಮಂದಿ ಈ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಿಶೇಷತೆಯಾಗಿದೆ. ಇಲ್ಲಿ ಹಿಡಿಯುವ ಮೀನನ್ನು ಗ್ರಾಮಸ್ಥರು ಖಾದ್ಯ ಮಾಡಿ ಕುಟುಂಬ ವರ್ಗದೊಂದಿಗೆ ಸವಿಯುವುದು ಜಾತ್ರೆಯ ವಿಶೇಷತೆಗಳಲ್ಲಿ ಒಂದು.



