ಮಾಜಿ ಸಚಿವ ಪೂಜಾರಿಯನ್ನು ಭೇಟಿಯಾದ ಅರಣ್ಯ ಸಚಿವ ಖಂಡ್ರೆ
ಬಂಟ್ವಾಳ: ರಾಜ್ಯದ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಸೋಮವಾರ ರಾತ್ರಿ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಅವರನ್ನು ಬಂಟ್ವಾಳದಲ್ಲಿರುವ ಅವರ ಮನೆಯಲ್ಲಿ ಭೇಟಿಯಾಗಿ ಆರೋಗ್ಯವನ್ನು ವಿಚಾರಿಸಿ, ಆರ್ಶೀವಾದ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಜನಾರ್ದನ ಪೂಜಾರಿಯವರು ಕಾಂಗ್ರೆಸ್ ಪಕ್ಷ ಕುಟುಂಬವಿದ್ದಂತೆ ಉತ್ತಮವಾಗಿ ಕೆಲಸ ಮಾಡಿ ಪಕ್ಷ ಮತ್ತು ಸರಕಾರಕ್ಕೆ ಒಳ್ಳೆ ಹೆಸರು ತರುವಂತೆ ಸಲಹೆ ನೀಡಿದರು.

ಇದೇ ವೇಳೆ ಸಚಿವ ಖಂಡ್ರೆ ಅವರ ತಂದೆ, ಮಾಜಿ ಸಚಿವ ಭೀಮಣ್ಣ ಖಂಡ್ರೆಯವರ ಒಡನಾಟವನ್ನು ಸ್ಮರಿಸಿದ ಪೂಜಾರಿಯವರು ಹೈಕೋಟ್೯ ನ್ಯಾಯಾಧೀಶರಾಗಿದ್ದ ಅವರ ಭಾವನ ಬಗ್ಗೆಯು ಸಚಿವರಲ್ಲಿ ವಿಚಾರಿಸಿದರು.

ಪೂಜಾರಿಯವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಕಾಲದಲ್ಲಿ ಪಕ್ಷದಿಂದ ಮಾದಲ ಬಾರಿಗೆ ಸ್ಪರ್ಧಿಸಲು ಭಿ ಫಾರಂ ನೀಡಿ ಅವಕಾಶ ನೀಡಿರುವುದನ್ನು ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿರುವುದನ್ನು ಸಚಿವ ಖಂಡ್ರೆ ಅವರು ಪೂಜಾರಿಯವರ ಗಮನಕ್ಕೆ ತಂದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್, ಕಾಂಗ್ರೆಸ್ ಸೇವಾದಳದ ಮುಖಂಡ ವೆಂಕಪ್ಪ ಪೂಜಾರಿ ಬಂಟ್ವಾಳ ಅವರು ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಹಾಗೂ ಮಾಜಿ ಸಚಿವ ರಮಾನಾಥ ರೈ ಅವರ ಪರವಾಗಿ ಸಚಿವ ಖಂಡ್ರೆ ಅವರನ್ನು ಸ್ವಾಗತಿಸಿದರು.
ಬೆಳ್ತಂಗಡಿ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಮ್, ಸಚಿವ ಖಂಡ್ರೆ ಅವರ ಪುತ್ರ ಸಾಗರ್ ಖಂಡ್ರೆ, ಮಂಗಳೂರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕರಿಕಲನ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕಮಲಾಕರಿಕಲನ್, ಉಪ ಸಂರಕ್ಷಣಾಧಿಕಾರಿ ಅಂತೋನಿ ಮರಿಯಪ್ಪ, ಎಸಿಎಫ್ ಪಿ. ಶ್ರೀಧರ, ಬಂಟ್ವಾಳ ವಲಯ ಅರಣ್ಯಾಧಿಕಾರಿ ಪ್ರಫಲ್ ರೈ ಮೊದಲಾದವರಿದ್ದರು.