ನೆತ್ತರಕೆರೆ: ಗೆಜ್ಜೆಗಿರಿ ಮೇಳದಿಂದ ಯಕ್ಷಗಾನ ಬಯಲಾಟ ಹಾಗೂ ಸನ್ಮಾನ ಕಾರ್ಯಕ್ರಮ
ಬಂಟ್ವಾಳ: ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ನೆತ್ತರಕೆರೆ ಶಾಲಾ ಮೈದಾನದಲ್ಲಿ ಶ್ರೀ ಆದಿ ದೂಮಾವತಿ ಶ್ರೀ ದೇವಿ ಬೈದತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಇವರಿಂದ “ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ”ಎಂಬ ಯಕ್ಷಗಾನ ಬಯಲಾಟ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಡಿ.10ರಂದು ಆದಿತ್ಯವಾರ ನಡೆಯಿತು.

ಸ್ಥಳೀಯ ವೈದ್ಯರಾದ ನಾರಾಯಣ ಪಂಡಿತ್ ಅವರ ಸೇವಾ ರೂಪದ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ದಾಮೋದರ ನೆತ್ತರಕೆರೆ ಅವರ ಸಮಾಜ ಸೇವೆಯನ್ನು ಗುರುತಿಸಿ ನಾರಾಯಣ ಪಂಡಿತ್ ಅವರು ಗೌರವಿಸಿ ಸನ್ಮಾನಿಸಿದರು.
ತಾಯಿ ಲಕ್ಷ್ಮಿ ಪತ್ನಿ ಪುಷ್ಪ ಸಮೇತರಾಗಿ ಸನ್ಮಾನ ಸ್ವೀಕರಿಸಿದ ದಾಮೋದರ ಬಳಿಕ ಮಾತನಾಡಿ ಸಮಾಜ ಸೇವೆ ಪುಣ್ಯದ ಕಾರ್ಯ, ನನ್ನ ಸಾಧನೆಯ ಹಿಂದಿನ ಶಕ್ತಿ ಈ ಊರಿನ ಜನ, ಆದ್ದರಿಂದ ನೆತ್ತರಕೆರೆಯ ಜನತೆಯ ಪರವಾಗಿ ಸನ್ಮಾನ ಸ್ವೀಕರಿಸಿದ್ದೇನೆ, ಊರಿನ ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸಿದ ದಾನಿಗಳು ಹಾಗೂ ಕಾರ್ಯಕರ್ತರನ್ನು ಈ ಸಂದರ್ಭದಲ್ಲಿ ಸ್ಮರಿಸಿದರು, ಸನ್ಮಾನದ ಗೌರವ ಮೊತ್ತವನ್ನು ಶಾಲೆಯ ಅಭಿವೃದ್ಧಿಗೆ ಸಮಾರ್ಪಿಸಿದರು.
ಪ್ರಮುಖರಾದ ಫರಂಗಿಪೇಟೆ ಸಹಕಾರಿ ಸೇವಾ ಸಂಘದ ಅಧ್ಯಕ್ಷ ಪಿ ಸುಬ್ರಮಣ್ಯ ರಾವ್, ಅಮ್ಟಾಡಿ ಸಹಕಾರಿ ಸೇವಾ ಸಂಘದ ನಿರ್ದೇಶಕ ಸುರೇಶ ಭಂಡಾರಿ ಅರ್ಬಿ, ನವೋದಯ ಮಿತ್ರ ಕಲಾ ವೃಂದದ ಅಧ್ಯಕ್ಷ ಸಂತೋಷ್ ಕುಮರ್, ಭೋಜರಾಜ್ ಬೆಂಗಳೂರು, ಚಂದ್ರಹಾಸ ನೆತ್ತರಕೆರೆ, ಸದಾನಂದ ಎನ್, ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ ಮತ್ತಿತರರು ಉಪಸ್ಥಿತರಿದ್ದರು.
ಯಕ್ಷ ಸಂಘಟಕ ಬಿ ಜನಾರ್ಧನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು, ಬಳಿಕ ಯಕ್ಷಗಾನ ಪ್ರದರ್ಶನಗೊಂಡು ಜನ ಮೆಚ್ಚುಗೆ ಪಡೆಯಿತು.