ಮಂಗಳೂರು: ಖಾಸಗಿ ಬಸ್ ಪಲ್ಸರ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ಮಂಗಳೂರಿನ ಲಾಲ್ ಬಾಗ್ ಸಮೀಪ ನಡೆದಿದೆ. ಕಿನ್ನಿಗೋಳಿ-ಬಜ್ಪೆ-ಮಂಗಳೂರು ರೂಟಿನಲ್ಲಿ ಸಂಚರಿಸುವ ರಾಜಶ್ರೀ ಎನ್ನುವ ಹೆಸರಿನ ಬಸ್ ಇದಾಗಿದ್ದು, ಮೃತಪಟ್ಟವರನ್ನು ಕುಡುಪು ನಿವಾಸಿ ಕಿರಣ್ ಕೋಟ್ಯಾನ್(42) ಎಂದು ಗುರುತಿಸಲಾಗಿದೆ.
ಬಜ್ಪೆ ಮಾರ್ಗವಾಗಿ ಬರುತ್ತಿದ್ದ ಬಸ್ ಲಾಲ್‍ಬಾಗ್ ಸಾಯಿಬೀನ್ ಕಾಂಪ್ಲೆಕ್ಸ್ ಸಮೀಪ ಸ್ಟೇಟ್‍ಬ್ಯಾಂಕ್ ತಿರುವು ಪಡೆಯುವಲ್ಲಿ ಘಟನೆ ಸಂಭವಿಸಿದೆ. ಕಿರಣ್ ಕೋಟ್ಯಾನ್ ಅವರು ಸಿಗ್ನಲ್ ಗಾಗಿ ಬೈಕನ್ನು ನಿಲ್ಲಿಸಿದ್ದು, ಸಿಗ್ನಲ್ ಕ್ಲಿಯರ್ ಆಗಿ ಮುಂದಕ್ಕೆ ಚಲಾಯಿಸಬೇಕು ಎನ್ನುವಷ್ಟರಲ್ಲಿ ಪಾದಚಾರಿಯೊಬ್ಬರು ರಸ್ತೆಯನ್ನು ಕ್ರಾಸ್ ಆಗಿದ್ದು, ಈ ವೇಳೆ ಬ್ರೇಕ್ ಹಾಕಿದ್ದಾರೆ. ಆಗ ಹಿಂಬದಿಯಿಂದ ಯಮದೂತನಂತೆ ಸಾಗಿಬಂದ `ರಾಜಶ್ರೀ’ ಬಸ್ ತಿರುವು ಪಡೆಯುವಲ್ಲಿ ಬೈಕ್ ಸಮೇತ ಕಿರಣ್ ರನ್ನು ಅಡಿಗೆ ಹಾಕಿ ಮುನ್ನುಗ್ಗಿದೆ.
ಬೈಕ್ ಬಸ್ಸಿನಡಿಗೆ ಬಿದ್ದು ನಜ್ಜುಗುಜ್ಜಾಗಿದ್ದು, ಕಿರಣ್ ಎದೆ, ಸೊಂಟ, ಕಾಲಿನ ಭಾಗಕ್ಕೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೂಡಲೇ ಕದ್ರಿ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ದಾವಿಸಿ ಮೃತದೇಹವನ್ನು ಎಜೆ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಈ ಬಗ್ಗೆ ಕದ್ರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





