Published On: Mon, Dec 4th, 2023

ಮಕ್ಕಳ ಕಲಾ ಲೋಕದಿಂದ ಸಾಮಾಜಿಕ ಸ್ವಚ್ಛತಾ ಅಭಿಯಾನ: “ಘಮ ಘಮಿಸುವ ಗುಟ್ಟು” ಕೃತಿ ಬಿಡುಗಡೆ‌

ಬಂಟ್ವಾಳ: ಬಂಟ್ವಾಳ ತಾಲೂಕಿನ ವ್ಯಾಪ್ತಿಯಲ್ಲಿರುವ ಮಕ್ಕಳ ಕಲಾ ಲೋಕದ ಚಟುವಟಿಕೆಗಳು ಜಿಲ್ಲಾ ಹಂತಕ್ಕೆ ವಿಸ್ತರಣೆಯಾಗಬೇಕು. ಪರಿಷತ್ತು ಮಕ್ಕಳ ಕಲಾ ಲೋಕದ ಎಲ್ಲ ಚಟುವಟಿಕೆಗಳನ್ನು ಬೆಂಬಲಿಸುತ್ತದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಾಥ ಉಜಿರೆ ಅವರು ಹೇಳಿದ್ದಾರೆ.

ಬಿ.ಸಿ. ರೋಡಿನ ಕನ್ನಡ ಭವನದಲ್ಲಿ ನಡೆದ ಬಂಟ್ವಾಳ ತಾಲೂಕು ಮಕ್ಕಳ ಕಲಾ ಲೋಕದ ವತಿಯಿಂದ ವಿಶ್ವ ಶಾಂತಿಗಾಗಿ ಸಾಮಾಜಿಕ ಸ್ವಚ್ಛತಾ ಅಭಿಯಾನ ಎಂಬ ವಿನೂತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜದ ಸ್ವಚ್ಛತೆ ಮತ್ತು ವಿಶ್ವ ಶಾಂತಿಯ ಸ್ಥಾಪನೆಗೆ ಪೂರಕವಾದ ಹೊಸ ಹೊಸ ಕೃತಿಗಳು ಪ್ರಕಟಗೊಳ್ಳಬೇಕು. ಮಕ್ಕಳ ಕಲಾ ಲೋಕ ಪ್ರಕಾಶಿತ ಕೃತಿ ಘಮ ಘಮಿಸುವ ಗುಟ್ಟು ಕಿರಿಯರು, ಯುವಕರು ಮತ್ತು ಹಿರಿಯರು ಒಟ್ಟುಗೂಡಿ ಮಾಡುವ ಆದರ್ಶ ಚಿಂತನೆಗಳು ಸಮಷ್ಠಿಯ ಹಿತಕ್ಕೆ ಅನುಕೂಲವಾಗುತ್ತವೆ ಎಂದರು.

ಯುವ ಸಾಹಿತಿ ಮಂಗಳೂರು ಯುನಿವರ್ಸಿಟಿ ಕಾಲೇಜಿನ ಪ್ರಥಮ ಎಂ ಎ ವಿದ್ಯಾರ್ಥಿ ಕುಮಾರ್ ಶಿವ ಪ್ರಸಾದ್  ಬೋಳಂತೂರು  ಪಾರಿವಾಳಗಳನ್ನು ಹಾರಿ ಬಿಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಪರಿಸರ ಸ್ವಚ್ಛತೆಯಂತೆ ಸಾಮಾಜಿಕ ಸ್ವಚ್ಛತೆಯನ್ನೂ ಮಾಡಲೇ ಬೇಕಾದ ಕಾಲಘಟ್ಟವಿದು. ಪರಸ್ಪರ ಹೊಂದಾಣಿಕೆ, ಸ್ನೇಹ, ಸಹಜೀವನ, ಸಹಕಾರ, ಪ್ರೀತಿ, ಸಮಯ ಪಾಲನೆ ಮುಂತಾದ ಬದುಕಿನ ಅನಿವಾರ್ಯ ಅಂಶಗಳ ಕೊರತೆಯನ್ನು ನೀಗಿ, ಸದ್ಭಾವ ಪೂರ್ಣ, ಶಾಂತ ಮನಸ್ಕ ಸಮಾಜ ನಿರ್ಮಾಣದಲ್ಲಿ ಸಾಮಾಜಿಕ ಸ್ವಚ್ಛತಾ ಅಭಿಯಾನ ಬೆಂಬಲವಾಗಿ ಕೂಡಿ ಬರಲಿ ಎಂದರು.

ಈ ಸಂದರ್ಭದಲ್ಲಿ ಸಾಹಿತಿ ಭಾಸ್ಕರ ಅಡ್ವಳ ವಿರಚಿತ “ಘಮ ಘಮಿಸುವ ಗುಟ್ಟು” ಎಂಬ ಜೀವನ ಮೌಲ್ಯಗಳ ಚಿಂತನಾ ಕೃತಿಯನ್ನು ಓಜಾಲ ಸ.ಹಿ.ಪ್ರಾ ಶಾಲಾ 7ನೇ ತರಗತಿ ವಿದ್ಯಾರ್ಥಿನಿ, ಎಳೆಯ ಸಾಹಿತಿ ಕುಮಾರಿ ಶ್ರುತಿಕಾ ಬಾಕಿಮಾರು ಅನಾವರಣಗೊಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ಸಾಹಿತಿ ವಿ.ಬಿ. ಕುಳಮರ್ವ ಕುಂಬಳೆಯವರು ಮಕ್ಕಳು ಬೆಳಗಿದರೆ ಸಮಾಜ ಬೆಳಗುತ್ತದೆ ಎಂಬ ಕಲಾಲೋಕದ ನಡೆ ಅಭಿನಂದನೀಯ ಎಂದರು.

ಸಾಹಿತಿ ಭಾಸ್ಕರ ಅಡ್ವಳ, ಬಂಟ್ವಾಳ ತಾಲೂಕು ಕ.ಸಾ.ಪ. ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಉಪಸ್ಥಿತರಿದ್ದರು.              
ಕಲ್ಲಂಗಳ ಕೇಪು ಪ್ರೌಢ ಶಾಲಾ ವಿದ್ಯಾರ್ಥಿನಿಯರಾದ ಅಕ್ಷಿತಾ ಮುಳಿಯ, ಹರ್ಷಿತಾ ಮಣಿಯಾರ ಪಾದೆ ಮತ್ತು ಪೃಥ್ವಿ ಉಬರು ಗೀತೆ ಹಾಡಿ, ಪುತ್ತೂರು ವಿವೇಕಾನಂದ ಕಾಲೇಜು ವಿದ್ಯಾರ್ಥಿನಿ ಸಹನಾ ಕೋಲ್ಪೆ ಸ್ವಾಗತಿಸಿದರು.

ಮಕ್ಕಳ ಕಲಾ ಲೋಕದ ಅಧ್ಯಕ್ಷ ರಮೇಶ ಎಂ.ಬಾಯಾರು ಪ್ರಾಸ್ತಾವಿಸಿದರು, ಕಲ್ಲಡ್ಕ  ಸರಕಾರಿ ಮಾ.ಹಿ.ಪ್ರಾ ಶಾಲಾ ವಿದ್ಯಾರ್ಥಿನಿ ಸ್ಫೂರ್ತಿ ವಂದಿಸಿದರು. ಸುರಿಬೈಲು ದಾರುಲ್ ಅಶ್ ಅರಿಯ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಮುಹಮ್ಮದ್ ಸಾಬಿತ್ ಕಾರ್ಯಕ್ರಮ ನಿರೂಪಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter