Published On: Fri, Oct 20th, 2023

ʼಬಿಂಬದೊಳಗೊಂದು ಬಿಂಬʼ ಲೋಕಾರ್ಪಣೆ, ತೃತೀಯ ಲಿಂಗಿಗಳಿಗೆ ಪ್ರೀತಿ ಅನುಕಂಪಕ್ಕಿಂತ ಉದ್ಯೋಗ ನೀಡಲು ಸಮಾಜ ಮುಂದೆ ಬರಬೇಕು

ಮಂಗಳೂರು: ತೃತೀಯ ಲಿಂಗಿಗಳಿಗೆ ಕೇವಲ ಪ್ರೀತಿ, ಅನುಕಂಪ ತೋರಿಸಿದರೆ ಪ್ರಯೋಜನವಿಲ್ಲ, ಅದರ ಬದಲು ಅವರ ಸ್ವಂತ ಜೀವನಕ್ಕೆ ನೆರವಾಗಲು ಸಮಾಜ ಬಾಂಧವರು ಉದ್ಯೋಗ ನೀಡಲು ಮುಂದೆ ಬರಬೇಕು ಎಂದು ಕರ್ನಾಟಕ ಜನಪದ ಅಕಾಡೆಮಿ ಮಾಜಿ ಅಧ್ಯಕ್ಷೆ, ಪದ್ಮಶ್ರೀ ಪುರಸ್ಕೃತೆ ಡಾ.ಮಾತಾ ಬಿ.ಮಂಜಮ್ಮ ಜೋಗತಿ ಹೇಳಿದ್ದಾರೆ.

ಬೆಂಗಳೂರಿನ ನವ ಕರ್ನಾಟಕ ಪ್ರಕಾಶನ ಹೊರತಂದ ಡಾ.ರೇಶ್ಮಾ ಉಳ್ಳಾಲ್ ಅವರ ಬಿಂಬದೊಳಗೊಂದು ಬಿಂಬ ಸಂಶೋಧನಾ ಕೃತಿಯನ್ನು  ಮಂಗಳೂರಿನ ರೋಶನಿ ನಿಲಯದ ಸಭಾಂಗಣದಲ್ಲಿ ಗುರುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಭಿಕ್ಷಾಟನೆ, ಲೈಂಗಿಕ ಕಾರ್ಯಕರ್ತೆಯರಾಗಿ ತೃತೀಯ ಲಿಂಗಿಗಳು ಬಹಳಷ್ಟು ಮಂದಿ ಇದ್ದಾರೆ. ವಿದ್ಯಾವಂತರು, ಅವಿದ್ಯಾವಂತರೂ ಇದ್ದಾರೆ, ಇವರೆಲ್ಲರಿಗೆ ದುಡಿಯಲು ಕೆಲಸ ಬೇಕು, ನಾಲ್ಕನೇ ದರ್ಜೆ ನೌಕರನಿಂದ ತೊಡಗಿ ವಿವಿಧ ಹುದ್ದೆಗಳಿಗೆ ಅರ್ಹತೆ ಹೊಂದುವ ವಿದ್ಯಾವಂತ
ತೃತೀಯ ಲಿಂಗಿಗಳೂ ಇದ್ದಾರೆ.

ಅಂತಹವರಿಗೆ ಕೆಲಸ ನೀಡಲು ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಮುಂದೆ ಬರಬೇಕು. ವಯಸ್ಸಾದ ತೃತೀಯ ಲಿಂಗಿಗಳಿಗೆ ಮಾಸಾಶನ ನೀಡುವಂತಾಗಬೇಕು. ಆಗ ತೃತೀಯ ಲಿಂಗಿಗಳ ಬಗೆಗಿನ ದೂರು ದೂರವಾಗಬಹುದು.

ಉದ್ಯೋಗದ ಆಫರನ್ನೂ ಒಪ್ಪದೆ ಅನಾವಶ್ಯಕ ತೊಂದರೆ ಕೊಡುತ್ತಿದ್ದರೆ ಅಂತಹವರ ವಿರುದ್ಧ ಖಂಡಿತ ಕ್ರಮ ಕೈಗೊಳ್ಳಲೇ ಬೇಕು ಎಂದು
ಅವರು ಹೇಳಿದರು. ತೃತೀಯ ಲಿಂಗಿಗಳ ಜೀವನ ಕ್ರಮ, ಎದುರಿಸುತ್ತಿರುವ ಸಮಸ್ಯೆಗಳ ಕುರಿತ ಈ ಕೃತಿ ನಮ್ಮ ಸಮುದಾಯದ ಅಭಿವೃದ್ಧಿಗೆ ದೊಡ್ಡ ಪ್ರತಿಬಿಂಬವಾಗಲಿ ಎಂದರು.

ತೃತೀಯ ಲಿಂಗಿಗಳಿಗೆ ಯೋಜನೆ:
ಅಧ್ಯಕ್ಷತೆ ವಹಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ತಮ್ಮದಲ್ಲದ ತಪ್ಪಿಗೆ ಜನಿಸಿರುವ ತೃತೀಯ ಲಿಂಗಿಗಳನ್ನು ಸಮಾಜ ಬೇರೆಯಾಗಿ ಕಾಣದೆ ಸಮಾನತೆಯನ್ನು ತೋರಿಸಬೇಕು. ಅವರಿಗೂ ಬದುಕು ಇದೆ ಎಂಬುದನ್ನು ಮನಗಾಣಬೇಕು. ತೃತೀಯ ಲಿಂಗಿಗಳ ಬದುಕಿಗೆ ನೆರವಾಗುವ ಯೋಜನೆಗಳ ಅನುಷ್ಠಾನಕ್ಕೆ ಜಿಲ್ಲಾಡಳಿತ ಸಿದ್ಧವಾಗಿದೆ.

ಸಮಾಜ ಸೇವಾ ಕಾರ್ಯದ ವಿದ್ಯಾರ್ಥಿಗಳು ಕೂಡ ತೃತೀಯ ಲಿಂಗಿಗಳ ಬದುಕು ಹಸನಾಗಲು ಸಮಾಜದಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಆಶಿಸಿದರು.

ಕಾಲೇಜುಗಳಲ್ಲಿ ಸಿನಿಮಾ ಕ್ಲಬ್:
ಈ ಕೃತಿಗೆ ಮುನ್ನುಡಿ ಬರೆದ ರಾಷ್ಟ್ರ ಪುರಸ್ಕೃತ ಚಲನಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು ಮಾತನಾಡಿ, ಸಲಿಂಗ ವಿವಾಹವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಇಂದಿನ ದಿನಗಳಲ್ಲಿ ಈ ಕೃತಿ ಹೊರ ತಂದಿರುವುದು ಸಕಾಲಿಕವಾಗಿದೆ. ತೃತೀಯ ಲಿಂಗಿಗಳ ಬದುಕನ್ನು ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ನೋಡಬೇಕು.

ಜಾತಿ ಗಣತಿಯಲ್ಲಿ ತೃತೀಯ ಲಿಂಗಿಗಳ ಬದುಕನ್ನು ಹೇಗೆ ಗುರುತಿಸುತ್ತಾರೆ ಎಂಬುದನ್ನು ಪರಿಶೀಲಿಸಬೇಕಾಗಿದೆ. ತೃತೀಯ ಲಿಂಗಿಗಳ ಜೀವನಕ್ಕೆ ಬೇಕಾದ ಸವಲತ್ತುಗಳನ್ನು ಸರ್ಕಾರ ನೀಡಬೇಕು.

ನಾನು ತೃತೀಯ ಲಿಂಗಿಗಳ ಕುರಿತಾಗಿ ಮಾಡಿದ ಸಿನಿಮಾ `ನಾನು ಅವನಲ್ಲ ಅವಳುʼ ಮುಂತಾದ ಸದಭಿರುಚಿಯ ಚಿತ್ರಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ತೋರಿಸಬೇಕಾಗಿದೆ. ಅದಕ್ಕಾಗಿ ಶಾಲಾ ಕಾಲೇಜುಗಳಲ್ಲಿ ಸಿನಿಮಾ ಕ್ಲಬ್ ರೂಪುಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಪಯಣ ಸಂಸ್ಥೆಯ ನಿರ್ದೇಶಕಿ ಸವಿತಾ ಮಾತನಾಡಿ, ಮೈಸೂರು ಹಾಗೂ ವಿಜಯಪುರಗಳಲ್ಲಿ ತೃತೀಯ ಲಿಂಗಿಗಳ ಬಗ್ಗೆ ಪ್ರಾಯೋಗಿಕವಾಗಿ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಇದನ್ನು ಇಡೀ ರಾಜ್ಯಕ್ಕೆ ವಿಸ್ತರಿಸಬೇಕು, ತೃತೀಯ ಲಿಂಗಿಗಳಿಗೆ ಪೊಲೀಸರ ತೊಂದರೆ ತಪ್ಪಬೇಕು ಎಂದರು.

ರೋಶನಿ ನಿಲಯದ ಉಪ ಪ್ರಾಂಶುಪಾಲೆ ಡಾ.ಜೆನಿಸ್ ಮೇರಿ ಶುಭ ಕೋರಿದರು. ಹಿರಿಯ ಪತ್ರಕರ್ತ ರಾಮಕೃಷ್ಣ ಆರ್., ರಕ್ಷಿತ್ ಜಿ. ಉಳ್ಳಾಲ್, ಆರ್. ತನ್ವಿ ಉಪಸ್ಥಿತರಿದ್ದರು.

ಸಂಶೋಧಕಿ ಡಾ.ರೇಶ್ಮಾ ಉಳ್ಳಾಲ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಡಾ.ಕಿಶೋರ್ ಕುಮಾರ್ ರೈ ಕಾರ್ಯಕ್ರಮ ನಿರ್ವಹಿಸಿದರು. ಸುಯೆಝ್ ಎಚ್. ಆರ್. ಮ್ಯಾನೇಜರ್ ರಾಕೇಶ್ ಶೆಟ್ಟಿ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter