ಗೋವಿನ ತೋಟ: ರಾಧಾ ಸುರಭಿ ಗೋ ಮಂದಿರದಲ್ಲಿ ಯುವ ಸಂಘಟನಾ ಸಮಾವೇಶ,ಹಿಂದೂ ಜೀವನ ಪದ್ಧತಿಯೆ ಮನುಕುಲದ ಶಾಂತಿಗೆ ಮೂಲ ಆಧಾರ: ಕ್ಯಾ. ಬ್ರಿಜೇಶ್ ಚೌಟ
ಬಂಟ್ವಾಳ: ಪುದುಗ್ರಾಮದ ಬ್ರಹ್ಮಗಿರಿ ಶ್ರೀರಾಧಾ ಸುರಭಿ ಗೋ ಮಂದಿರ ರಾಷ್ಟ್ರೀಯ ಗೋ ಸೇವಾ ಸಂಸ್ಥಾನದಲ್ಲಿ ನಡೆಯಲಿರುವ ಅಷ್ಟೋತ್ತರ ಶತ ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ,ಮಹಾಯಜ್ಞ ಹಾಗೂ ಗೋ ನವರಾತ್ರಿ ಉತ್ಸವದ ಪೂರ್ವಭಾವಿಯಾಗಿ ಯುವ ಸಂಘಟನಾ ಸಮಾವೇಶವು ಭಾನುವಾರ ರಾಧಾ ಸುರಭಿ ಗೋ ಮಂದಿರದ ಗೋವಿನ ತೋಟದಲ್ಲಿ ನಡೆಯಿತು.
ಅಷ್ಟೋತ್ತರ ಶತ ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ ಸಮಿತಿಯ ಅಧ್ಯಕ್ಷ ಕ್ಯಾಪ್ಟನ್ ಬ್ರಿಜೇಶ್ ಚೌಟ ಯುವ ಸಂಘಟನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ,ದೇಶವು ಇಂದು ಅಮೃತ ಕಾಲದಲ್ಲಿ ಇದೆ.ನಮಗೆ ಹಿಂದೂ ಧರ್ಮದ ಸಂಸ್ಕೃತಿ,ಸಂಸ್ಕಾರ,ಆಚಾರ ವಿಚಾರಗಳಲ್ಲಿ ನಂಬಿಕೆ ಮುಖ್ಯ ಧರ್ಮದ ಆಧಾರದಲ್ಲಿ ಮಾತ್ರ ದೇಶವು ವಿಶ್ವ ಗುರುವಾಗಲು ಸಾಧ್ಯ.ಹಿಂದೂ ಜೀವನ ಪದ್ಧತಿಯೆ ಜಗತ್ತಿನ ಮನುಕುಲದ ಶಾಂತಿಗೆ ಮೂಲ ಆಧಾರ ಎಂದು ಹೇಳಿದರು.
ರಾಧಾ ಸುರಭಿ ಗೋ ಮಂದಿರದ ಭಕ್ತಿ ಭೂಷಣ್ ದಾಸ್ ಪ್ರಭು ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿ,ಹರಿನಾಮದ ಸ್ಮರಣೆಯಿಂದ ಭಗವಂತನ ಅನುಗ್ರಹವಾಗುತ್ತದೆ,ಬ್ರಾಹ್ಮೀ ಮುಹೂರ್ತದಲ್ಲಿ ಹರಿ ನಾಮ ಜಪ ಮಾಡಿದರೆ ಧರ್ಮಾಧಾರಿತ ಜೀವನ ಮಾಡಲು ಬದ್ಧತೆ ಬರುತ್ತದೆ.ಗೋವು ಆಧಾರಿತ ಕೃಷಿ ಮತ್ತು ಗುರುಕುಲ ಶಿಕ್ಷಣದಿಂದ ಧರ್ಮದ ಉನ್ನತಿ ಸಾಧ್ಯ.ಭಾರತವೆಂಬ ಪವಿತ್ರ ಭೂಮಿಯಲ್ಲಿ ಯುವ ಜನಾಂಗವು ರಾಷ್ಟ್ರ ರಕ್ಷಣೆ,ಧರ್ಮ ರಕ್ಷಣೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನ್ಮವನ್ನು ಸಾರ್ಥಕ ಮಾಡಿ ಕೊಳ್ಳುವಂತೆ ಕರೆ ನೀಡಿದರು.
ಅಷ್ಟೋತ್ತರ ಶತ ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್ ರೈ ಮಾತನಾಡಿ,ಭಾರತ ದೇಶವು ಪ್ರಸ್ತುತ ಅಧಿಕ ಯುವ ಸಂಪತ್ತು ಹೊಂದಿದ್ದು,ಭವಿಷ್ಯವು ತರುಣ ಸಂಘಟನೆಯ ಸಾಮರ್ಥ್ಯದ ಮೇಲೆ ನಿಂತಿದೆ. ಯುವ ಪಡೆಯು ಸಂಘಟನಾತ್ಮಕವಾಗಿ ತೊಡಗಿಸಿಕೊಂಡು ರಾಷ್ಟ್ರ ಧರ್ಮದ ರಕ್ಷಣೆಗಾಗಿ ಪಣ ತೊಡಬೇಕಾಗಿದೆ ಎಂದರು.
ಸಮಿತಿಯ ಕಾರ್ಯಧ್ಯಕ್ಷ ಟಿ ತಾರಾನಾಥ ಕೊಟ್ಟಾರಿ ಪ್ರಾಸ್ತವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ ಸಂಘಟನಾ ಕಾರ್ಯದರ್ಶಿ ರತ್ನಾಕರ ಶೆಟ್ಟಿ ಕಲ್ಲಡ್ಕ,ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಗಳೂರು ವಿಭಾಗ ಸಹ ಕಾರ್ಯವಾಹಕ ಹರಿಕೃಷ್ಣ ಮಂಗಳೂರು ಉಪಸ್ಥಿತರಿದ್ದರು.
ಪ್ರಮುಖರಾದ ಪದ್ಮನಾಭ ಶೆಟ್ಟಿ ಪುಂಚಮೆ,ಗಣೇಶ್ ಸುವರ್ಣ ತುಂಬೆ,ಅನಿಲ್ ಪಂಡಿತ್,ವಿನೋದ್ ಕೊಡ್ಮಣ್ಣು,ಮನೋಜ್ ಆಚಾರ್ಯ,ಮನೋಹರ್ ಕಂಜತ್ತೂರ್,ವಿಜಯ ಕಜೆಕಂಡ,ಜಗದೀಶ್ ಬಂಗೇರ ನೆತ್ತರಕೆರೆ,ಯೋಗೀಶ್ ಕಡೆಗೋಳಿ,ಸಂತೋಷ್ ನೆತ್ತರಕೆರೆ ಮತ್ತಿತರರು ಇದ್ದರು.
ಪ್ರ. ಕಾರ್ಯದರ್ಶಿ ದಾಮೋದರ ನೆತ್ತರಕೆರೆ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.