ಆರು ಮಂದಿ ದೋಷಿಗಳಿಗೆ ಅ.೫ರಂದು ಹೈ ಕೋರ್ಟ್ ನಿಂದ ಶಿಕ್ಷೆ ಘೋಷಣೆ
ಸುಳ್ಯ: ಕೆವಿಜಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಎ.ಎಸ್.ರಾಮಕೃಷ್ಣ ಅವರ ಹತ್ಯೆ ಪ್ರಕರಣವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿತ್ತು.ಈ ಪ್ರಕರಣದಲ್ಲಿ ಡಾ.ರೇಣುಕಾ ಪ್ರಸಾದ್ ಸೇರಿದಂತೆ ೬ ಮಂದಿಯನ್ನು ದೋಷಿಗಳು ಎಂದು ತೀರ್ಮಾನಿಸಿ ಹೈಕೋರ್ಟ್ ಬುಧವಾರ ಮಹತ್ವದ ಆದೇಶ ಹೊರಡಿಸಿದೆ.
ಎ.ಎಸ್.ರಾಮಕೃಷ್ಣ ಅವರನ್ನು ೨೦೧೧ ಎಪ್ರಿಲ್ ೨೮ ಬೆಳಗ್ಗೆ ೭:೪೫ರ ವೇಳೆ ಸುಳ್ಯ ನಗರದ ಅಂಬೆತಡ್ಕ ಬಳಿಯ ಶ್ರೀ ಕೃಷ್ಣ ಆಯುರ್ವೇದಿಕ್ ಥೆರಪಿ ಕ್ಲಿನಿಕ್ ರಸ್ತೆಯಲ್ಲಿ ನಡೆದು ಹೋಗುತ್ತಿರುವಾಗ ಆರೋಪಿಗಳು ದಾಳಿ ನಡೆಸಿ ಕೊಲೆ ಮಾಡಲಾಗಿತ್ತು.
ಪ್ರಕರಣವನ್ನು ವಿಚಾರಣೆ ಮಾಡಿದ ಪುತ್ತೂರಿನ ೫ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಪ್ರಮುಖ ಆರೋಪಿ ರೇಣುಕಾ ಪ್ರಸಾದ್ ಸೇರಿದಂತೆ ೬ ಮಂದಿ ಆರೋಪಿಗಳನ್ನು ಬಹಿರಂಗಪಡಿಸಿತ್ತು.ಏಳು ಆರೋಪಿಗಳ ಪೈಕಿ ಡಾ.ರೇಣುಕಾ ಪ್ರಸಾದ್,ಮನೋಜ್ ರೈ,ಎಚ್.ಆರ್ ನಾಗೇಶ್,ವಾಮನ ಪೂಜಾರಿ,ಶರಣ್ ಪೂಜಾರಿ ಮತ್ತು ಶಂಕರ ಅವರನ್ನು ಮೃತ ಎ.ಎಸ್.ರಾಮಕೃಷ್ಣ ಅವರ ಹತ್ಯೆ ಮತ್ತು ಕೊಲೆಗೆ ಒಳಸಂಚು ರೂಪಿಸಿದ ಪ್ರಕರಣದಲ್ಲಿ ದೋಷಿಗಳೆಂದು ತೀರ್ಮಾನಿಸಿದೆ.
ಪ್ರಕರಣ ಹಿನ್ನೆಲೆ: ಕುರುಂಜಿ ವೆಂಕಟರಮಣ ಗೌಡ ಅವರು ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಸ್ಪಿ÷್ಲಂಟರ್ ಇನ್‌ಸ್ಟಿಟ್ಯೂಷನ್ಸ್ ಸಂಸ್ಥಾಪಕರಾಗಿದ್ದರು,ವಯಸ್ಸಾದ ಮತ್ತು ಅನಾರೋಗ್ಯದ ಕಾರಣ ಶೈಕ್ಷಣಿಕ ಸಂಸ್ಥೆಗಳ ನಿರ್ವಹಣೆಯ ಹೊಣೆಯನ್ನು ಅವರು ಹಿರಿಯ ಪುತ್ರ ಕೆ.ವಿ.ಚಿದಾನಂದ ಮತ್ತು ಕಿರಿಯ ಪುತ್ರ ರೇಣುಕಾ ಪ್ರಸಾದ್ ಅವರಿಗೆ ವಿಭಜನೆ ಮಾಡಿ ಕೊಟ್ಟಿದ್ದರು.ಆ ಸಮಯದಲ್ಲಿ ಎ.ಎಸ್ ರಾಮಕೃಷ್ಣ ಕೆವಿಜೆ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲಾಗಿದ್ದರು.ಆಸ್ತಿ,ಶೈಕ್ಷಣಿಕ ಸಂಸ್ಥೆಗಳ ಹೊಣೆಗಾರಿಕೆ ವಿಭಜನೆಯನ್ನು ರಾಮಕೃಷ್ಣರ ಸಲಹೆಯ ಮೇರೆಗೆ ಮಾಡಲಾಗಿದೆ ಎಂದು ಭಾವಿಸಿದ್ದ ರೇಣುಕಾ ಪ್ರಸಾದ್ ,ಚಿದಾನಂದ ಅವರ ಪರವಾಗಿ ಕೆವಿಜಿ ಮೆಡಿಕಲ್ ಕಾಲೇಜು ವ್ಯವಹಾರಗಳನ್ನು ಸಹ ರಾಮಕೃಷ್ಣರೇ ನೋಡಿಕೊಳ್ಳುತ್ತದ್ದಾರೆ ಎಂದು ಭಾವಿಸಿ ರಾಮಕೃಷ್ಣ ಅವರ ಕೊಲೆಗೆ ಸುಪಾರಿ ನೀಡಿದ್ದರು.
ಇದೀಗ ರೇಣುಕಾ ಪ್ರಸಾದ್ ಹಾಗೂ ಇತರೆ ಐವರು ಆರೋಪಿಗಳು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಕ್ಷ್ಯಾಧಾರಗಳ ಸಮೇತ ದೃಢಪಟ್ಟಿದೆ ಎಂದು ತೀರ್ಮಾನಿಸಿರುವ ಹೈಕೋರ್ಟ್ ಎಲ್ಲರನ್ನೂ ಕೊಲೆ ಮತ್ತು ಅಪರಾಧಿಕ ಒಳಸಂಚಿನ ಕೃತ್ಯದಲ್ಲಿ ದೋಷಿ ಎಂದು ತೀರ್ಮಾನಿಸಿದೆ.
ದೋಷಿಗಳಿಗೆ ಶಿಕ್ಷೆ ಪ್ರಮಾಣ ನಿಗದಿ ಪಡಿಸುವ ಕುರಿತು ಅ.೫ರಂದು ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ.