ಬಾರ್ದಿಲ: ಆಗಸ್ಟ್ ೩೧, ಬೆಟ್ಟದೊಡೆಯನ ಬಾಲಾಲಯ ಪ್ರತಿಷ್ಠಾಪನೆಗೆ ಭರದ ಸಿದ್ಧತೆ
ಕೈಕಂಬ: ಸಂಪೂರ್ಣ ಜೀರ್ಣೋದ್ದಾರಗೊಳ್ಳುತ್ತಿರುವ, ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ಬಾರ್ದಿಲ ಶ್ರೀಸಾಂಬ ಸದಾಶಿವ ದೇವಸ್ಥಾನದ ನೂತನ ಗರ್ಭಗುಡಿ ನಿರ್ಮಾಣದ ಪ್ರಯುಕ್ತ ಆಗಸ್ಟ್ ೩೧ ರಂದು ಶ್ರೀದೇವರ ಬಾಲಲಯ ಪ್ರತಿಷ್ಠೆ ನಡೆಯಲಿದ್ದು, ಬಾಲಾಲಯ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಆಗಸ್ಟ್ ೩೧ ರ ಗುರುವಾರ ಬೆಳಿಗ್ಗೆ ೮ ಗಂಟೆಯಿAದ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭವಾಗಳಿದ್ದು, ದೇರೆಬೈಲು ಡಾ|ಡಿ. ಶಿವಪ್ರಸಾದ್ ತಂತ್ರಿಗಳ ನೇತೃತ್ವದಲ್ಲಿ, ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಕಾರಂತ ಅವರ ಉಪಸ್ಥಿತಿಯಲ್ಲಿ ಮಧ್ಯಾಹ್ನ ೧೨.೦೫ ರ ಅಭಿಜಿತ್ ಲಗ್ನ ಸುಮುಹೂರ್ತದಲ್ಲಿ ಶ್ರೀ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪನೆ ನಡೆಸಲಾಗುವುದು.

ಬಳಿಕ ನೂತನ ಶಿಲಾಮಯ ಗರ್ಭಗುಡಿ ನಿರ್ಮಾಣ ಕಾರ್ಯ ಪ್ರಾರಂಭವಾಗಳಿದ್ದು, ಶ್ರೀದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪನೆ ಬಳಿಕ ೧೦ ತಿಂಗಳ ಒಳಗಡೆ ಗರ್ಭಗುಡಿ ನಿರ್ಮಾಣವಾಗಬೇಕಾಗಿದ್ದು ಅಂದಾಜು ೨ಕೋಟಿ ೨೫ ಲಕ್ಷ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ದಾರಗೊಳ್ಳುತ್ತಿರುವ ದೇವಸ್ಥಾನದ ಸುತ್ತು ಪೌಳಿ ಮತ್ತು ಗೋಪುರ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈಗ ಇರುವ ಸುಮಾರು ೩೦ ವರ್ಷ ಹಳೆಯ ಗರ್ಭಗುಡಿಯನ್ನು ತೆರವುಗೊಳಿಸಿ ನೂತನ ಶಿಲಾಮಯ ಗರ್ಭಗುಡಿ ನಿರ್ಮಾಣವಾಗಲಿದೆ.
ಕ್ಷೇತ್ರ ಹಿನ್ನಲೆ: ಎತ್ತರವಾದ ಬೆಟ್ಟದಲ್ಲಿ ಸಾವಿರಾರು ವರ್ಷಗಳ ಹಿಂದೆ ಶಿವ ಪಾರ್ವತಿಯರು ಗಣಪತಿ ಸಹಿತ ಸಾಂಬಾ ಸದಾಶಿವರಾಗಿ ಈ ಕ್ಷೇತ್ರದಲ್ಲಿ ನೆಲೆಸಿದ್ದು, ಕಾಲಾನಂತರದಲ್ಲಿ ಇಲ್ಲಿ ಸಾಂಬಾ ಸದಾಶಿವನ ಆರಾಧನೆ ನಡೆದು ಕೃಮೇಣ ಕಾಲದ ಪರಿಸ್ಥಿತಿಗೆ ಸಿಲುಕಿ ಆರಾಧನೆ ಸ್ಥಗಿತಗೊಂಡಿತು. ಸುಮಾರು ೮೫೦ ವರ್ಷಗಳ ಹಿಂದೆ ಇಲ್ಲಿದ್ದ ದೇವಸ್ಥಾನ ಶಿಥಿಲಗೊಂಡು ಪೂಜಾದಿಗಳು ನಿಂತುಹೋದ ಕಾರಣ ಇಲ್ಲಿದ್ದ ಪವಿತ್ರ ಶಿವಲಿಂಗವನ್ನು ಪುತ್ತಿಗೆಯಲ್ಲಿ ಚೌಟ ಅರಸರಿಂದ ನಿರ್ಮಾಣಗೊಂಡ ಸೋಮನಾಥೆಶ್ವರ ಕ್ಷೇತ್ರಕ್ಕೆ ಕೊಂಡು ಹೋಗಲಾಯಿತು.
ಅಂದಾಜು ೪೫ ವರ್ಷಗಳ ಹಿಂದೆ ಜ್ಯೋತಿಷ್ಯ ಪ್ರಶ್ನೆಯಲ್ಲಿ ದೇವರಗುಡ್ಡೆ ಎಂಬಲ್ಲಿ ಶಿವ ದೇವಾಲಯದ ಕುರುಹುಗಳು ಇರುವುದು ಕಂಡು ಬಂದ ಹಿನ್ನಲೆಯಲ್ಲಿ ಐ. ರಾಮ ಅಸ್ರಣ್ಣ ಮತ್ತು ಯಂ. ಕಾಂತಪ್ಪ ಶೆಟ್ಟಿಯವರ ಮುಂದಾಳುತ್ವದಲ್ಲಿ, ಮಿಜಾರುಗುತ್ತು ಆನಂದ ಆಳ್ವ ರ ಅಧ್ಯಕ್ಷತೆಯಲ್ಲಿ ರಚಿತವಾದ ಜೀರ್ಣೋದ್ದಾರ ಸಮಿತಿಯಿಂದ ಪ್ರಸ್ತುತ ಇರುವ ಗರ್ಭಗುಡಿಯೊಂದಿಗೆ ದೇವಾಲಯ ನಿರ್ಮಾಣವಾಗಿ ೧೯೯೨ ರ ಮಾರ್ಚ್ ೧೮ರಂದು ಊರ-ಪರವೂರ ಭಕ್ತರ ಸಹಕಾರದಲ್ಲಿ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ನಡೆದಿತ್ತು.
ಇದೀಗ ದ.ಕ. ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರುಗಳಾದ ಡಾ|ವೈ ಭರತ್ ಶೆಟ್ಟಿ ಮತ್ತು ಉಮಾನಾಥ ಕೋಟ್ಯಾನ್ ರವರ ಗೌರವಾಧ್ಯಕ್ಷತೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸೋಮಶೇಖರ್ ಶೆಟ್ಟಿ ಉಳಿಪಾಡಿಗುತ್ತು ಇವರ ಮಾರ್ಗದರ್ಶನದಲ್ಲಿ ಸಮಿತಿಯ ಸದಸ್ಯರ ಸಹಕಾರದಲ್ಲಿ ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ ಅವರ ಅಧ್ಯಕ್ಷತೆಯಲ್ಲಿ ಜಗದೀಶ್ ಪಾಕಜೆ , ಶ್ರೀನಿವಾಸ್ ಶೆಟ್ಟಿ ಕಟ್ಟಪುಣಿ, ಕಿಲೆಂಜಾರು, ಕುಲವೂರು, ಇರುವೈಲು ಮತ್ತು ಮುತ್ತೂರು ಗ್ರಾಮಗಳ ಪ್ರಮುಖರನ್ನು ಒಳಗೊಂಡ ಜೀರ್ಣೋದ್ದಾರ ಸಮಿತಿಯಿಂದ, ವಾಸ್ತುಶಿಲ್ಪಿ ಕುಡುಪು ಕೃಷ್ಣರಾಜ ತಂತ್ರಿಗಳ ವಾಸ್ತು ವಿನ್ಯಾಸದ ಶಿಲಾಮಯ ಗರ್ಭಗುಡಿ ಸಹಿತ ಸಂಪೂರ್ಣ ದೇವಾಲಯದ ಜೀರ್ಣೋದ್ದಾರದ ಮಹತ್ಕಾರ್ಯ ನಡೆಯುತ್ತಿದ್ದು, ಬಾಲಾಲಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ