ಬಜ್ಪೆ : ಬ್ಯಾಟರಿ ಕಳ್ಳರು
ಕಾರು ಸಹಿತ ಇಬ್ಬರ ಬಂಧನ
ಕೈಕಂಬ : ಬಜ್ಪೆ ಠಾಣಾ ವ್ಯಾಪ್ತಿಯ ಅಡ್ಡೂರು, ಕೈಕಂಬ ಮತ್ತು ಗುರುಪುರ ಪರಿಸರದಲ್ಲಿ ಪಾರ್ಕ್ ಮಾಡಲಾದ ಟಿಪ್ಪರ್ ಲಾರಿ, ಜೆಸಿಬಿ ಮತ್ತು ಇತರ ವಾಹನಗಳಿಂದ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್‌ನ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ವಾಹನಗಳ ಬ್ಯಾಟರಿ ಕಳವಿನ ಬಗ್ಗೆ ಠಾಣೆಯಲ್ಲಿ ೨ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಠಾಣಾಧಿಕಾರಿ ಪ್ರಕಾಶ್ ನೇತೃತ್ವದ ಪೊಲೀಸ್ ತಂಡ ತನಿಖೆ ನಡೆಸುತ್ತಿದ್ದಾಗ, ಆ. ೮ರಂದು ಬಜ್ಪೆಯ ಒಡ್ಡಿದಕಲ ಎಂಬಲ್ಲಿ ಬ್ಯಾಟರಿ ಕಳುವು ಮಾಡಿ ಪರಾರಿಯಾಗುತ್ತಿದ್ದ ಕಾರು ತಡೆದು ವಿಚಾರಿಸಿದಾಗ ಇಬ್ಬರ ಕಳ್ಳರು ಪತ್ತೆಯಾಗಿದ್ದಾರೆ.
ಆರೋಪಿಗಳಾದ ಮೂಡುಪೆರಾರ ಗ್ರಾಮದ ಈಶ್ವರಕಟ್ಟೆಯ ರಾಘವೇಂದ್ರ ಭಜನಾ ಮಂದಿರಕ್ಕೆ ಹತ್ತಿರದ ನಿವಾಸಿ ಪ್ರತಾಪ್(೨೦) ಮತ್ತು ಕಂದಾವರ ಗ್ರಾಮದ ಚರ್ಚ್ ರೋಡ್ ಬಳಿಯ ನಿವಾಸಿ ಅನಿಲ್ ಯಾನೆ ಅನಿ(೨೩) ಎಂಬವರನ್ನು ಬಂಧಿಸಿದ ಪೊಲೀಸರು ಅವರಿಂದ ೪ ಲಕ್ಷ ರೂ ಮೌಲ್ಯದ ಒಂದು ಕಾರು ಹಾಗೂ ೧.೫೦ ಲಕ್ಷ ರೂ ಮೌಲ್ಯದ ೧೭ ಅಮರೋನ್ ಕಂಪೆನಿಯ ಬ್ಯಾಟರಿ ವಶಪಡಿಸಿಕೊಂಡಿದ್ದಾರೆ.