ಜನ ಅಪೇಕ್ಷೆ ಪಡುವವರೇ ನಾಯಕರಾಗಬೇಕು: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಕಚೇರಿ ಉದ್ಘಾಟಿಸಿ ಡಾ. ಪ್ರಭಾಕರ ಭಟ್
ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಶಾಸಕರ ಕಚೇರಿ ಉದ್ಘಾಟನೆ ಬಿ.ಸಿ.ರೋಡಿನಲ್ಲಿ ಸೋಮವಾರ ನಡೆಯಿತು. ಈ ಸಂದರ್ಭ ಹಿರಿಯ ಆರೆಸ್ಸೆಸ್ ಮುಖಂಡ ಹಾಗೂ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಕಚೇರಿಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ರಾಜೇಶ್ ನಾಯ್ಕ್ ಅವರನ್ನು ಜನರು ಇಷ್ಟಪಟ್ಟ ಹಿನ್ನೆಲೆಯಲ್ಲಿ ಅವರು ಮತ್ತೊಮ್ಮೆ ಶಾಸಕರಾಗಿದ್ದಾರೆ. ಜನ ಅಪೇಕ್ಷೆ ಪಡುವವರೇ ನಾಯಕರಾಗಬೇಕು ಎಂದು ಹೇಳಿದರು.
ಎಲ್ಲ ಕಾರ್ಯಕರ್ತರ ಪರಿಶ್ರಮದಿಂದ ಕಳೆದ ಐದು ವರ್ಷಗಳಲ್ಲಿ ರಾಜೇಶ್ ನಾಯ್ಕ್ ಮಾಡಿದ ಸಮಾಜಮುಖಿ ಕೆಲಸಗಳಿಂದ ಜನ ಬಿಜೆಪಿಯನ್ನು ರಾಜೇಶ್ ನಾಯ್ಕ್ ಅವರನ್ನು ಒಪ್ಪಿಕೊಂಡಿದ್ದಾರೆ ಎಂದರು. ಜನ ಅಪೇಕ್ಷೆ ಮಾಡಿದಂಥವನೇ ನಾಯಕನಾಗಬೇಕು. ಯಾರನ್ನೂ ಮೇಲಿಂದ ಹೊರಿಸುವಂಥದ್ದಲ್ಲ, ಅದನ್ನು ಒಪ್ಪಿಕೊಳ್ಳುವುದಿಲ್ಲ ಜನ. ಯಾರು ಜನ ಅಪೇಕ್ಷೆ ಮಾಡುತ್ತಾರೆ, ಅಂಥವರು ಆದರೆ ಜನರು ಪೂರ್ಣ ಮನಸ್ಸಿನಿಂದ ಆಯ್ಕೆ ಮಾಡುತ್ತಾರೆ. ರಾಜೇಶ್ ನಾಯ್ಕ್ ಅವರನ್ನು ಜನರು ಒಪ್ಪಿಕೊಂಡಿದ್ದಾರೆ, ಮತ್ತೆ ಎರಡನೇ ಬಾರಿ ಆಯ್ಕೆಯಾಗಿದ್ದಾರೆ ಎಂದರು.
ಎಲ್ಲಿ ಸಮಸ್ಯೆ ಇದೆ, ಎಲ್ಲಿ ಲೋಪ ಇದೆ ಅಲ್ಲಿ ಧಾವಿಸುವ ಪ್ರವೃತ್ತಿ ರಾಜೇಶ್ ನಾಯ್ಕ್ ಅವರಿಗಿದೆ. ವಿಜಯೋತ್ಸವ ಮೆರವಣಿಗೆ ಮಾಡುವ ಖರ್ಚನ್ನು ಯಾರು ಕಳೆದ ಕೆಲವು ವರ್ಷಗಳಲ್ಲಿ ತೊಂದರೆಗೆ ಒಳಗಾಗಿದ್ದಾರೆ, ಕೆಲವರು ಜೀವವನ್ನೇ ಕಳೆದುಕೊಂಡಿದ್ದಾರೆ, ಅಂಥವರ ಮನೆಗೆ ನೀಡುವ ರಚನಾತ್ಮಕ ಕಾರ್ಯಕ್ಕೆ ರಾಜೇಶ್ ನಾಯ್ಕ್ ತೊಡಗಿಸಿಕೊಂಡಿದ್ದಾರೆ. ಇದು ನಮಗೆಲ್ಲರಿಗೂ ಒಂದು ಸಂದೇಶವಾಗಿದೆ. ವಿಜಯೋತ್ಸವಕ್ಕೆಂದು ಇರುವ ಹಣ ಸಂಗ್ರಹ ಮಾಡಿ, ಯಾರು ಕಷ್ಟದಲ್ಲಿದ್ದಾರೆ ಅವರಿಗೆ ನೀಡಿ, ರಾಜೇಶ್ ನಾಯ್ಕ್ ಅವರ ಮೂಲಕವೇ ನೀಡಿ. ಸೇವೆಯೇ ನಮ್ಮ ಮೂಲ ಉದ್ದೇಶ ಎಂದರು.
ಭಾರತೀಯ ಜನತಾ ಪಾರ್ಟಿಯನ್ನು ಕಟ್ಟಿ ಬೆಳೆಸುವ ಕೆಲಸವಿದೆ, ಸಂಘಟನೆ ಇನ್ನಷ್ಟು ಬಲಶಾಲಿಯಾಗಬೇಕು, ಬಿಜೆಪಿಯ ಚಿಂತನೆ ವೈಚಾರಿಕತೆಯ ತಳಹದಿಯಲ್ಲಿದೆ. ಅದೇನು ಎಂಬುದನ್ನು ಆಗಾಗ ನೆನಪು ಮಾಡುವ ಪ್ರಶಿಕ್ಷಣ ವರ್ಗಗಳು ಹೆಚ್ಚು ನಡೆಯಬೇಕು. ನಮ್ಮ ಮೂಲ ಚಿಂತನೆ ಬಲವಾಗಿಸಬೇಕು, ಒಂದು ಕಡೆಯಲ್ಲಿ ಸಂಘಟನೆ, ಇನ್ನೊಂದು ಕಡೆ ಜನಸೇವೆಯನ್ನು ಮಾಡಬೇಕು. ಬಂಟ್ವಾಳ ಕ್ಷೇತ್ರಕ್ಕೆ ಅಮೋಘ ಕೊಡುಗೆಯನ್ನು ಕೊಟ್ಟಿದೆ ಎಂದರು.
ವಿಶಿಷ್ಟವಾದ ಚಿಂತನೆ ಆಧಾರದ ಮೇಲೆ ಹೊಸ ಪಾರ್ಲಿಮೆಂಟ್ ನಿನ್ನೆ ಉದ್ಘಾಟನೆಯಾಗಿತ್ತು. ಬಿಜೆಪಿ ತನ್ನ ತತ್ವ ಸಿದ್ಧಾಂತಗಳಿಗೆ ಬದ್ಧವಾಗಿ ನಡೆದುಕೊಂಡು ಬಂದಿದೆ. ಕಳೆದ ಆರೂವರೆ ದಶಕಗಳ ಕಾಲ ಭಾರತ ವಿದೇಶಿ ಚಿಂತನೆಗಳ ಆಧಾರದಲ್ಲಿತ್ತು. ಆದರೆ 2014ರಲ್ಲಿ ನರೇಂದ್ರ ಮೋದಿ ಭಾರತದ ಪ್ರಧಾನಿಯಾದರೋ ಬಳಿಕ ಭಾರತ ಸ್ವದೇಶಿ ಚಿಂತನೆ ಮೂಲಕ ಆಡಳಿತ ಆರಂಭಿಸಿತು ಎಂದರು.
ಈ ಸಂದರ್ಭ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ತಾನು ಕಳೆದ ಹತ್ತು ವರ್ಷಗಳಿಂದ ಜನರೊಂದಿಗಿದ್ದು ಕೆಲಸ ಮಾಡಿದ್ದೇನೆ. ಕಳೆದ ಬಾರಿ ಶಾಸಕನಾಗಿದ್ದೆ. ಈಗ ಎರಡನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು, ಹಿರಿಯರ ಮಾರ್ಗದರ್ಶನ ಹಾಗೂ ಜನತೆಯ ಆಶೀರ್ವಾದದ ಮೂಲಕ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭ ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಸುಲೋಚನಾ ಭಟ್, ದೇವದಾಸ್ ಶೆಟ್ಟಿ, ಸುದರ್ಶನ ಬಜ, ರವೀಶ್ ಶೆಟ್ಟಿ ಕರ್ಕಳ, ಗೋವಿಂದ ಪ್ರಭು, ಮಾಧವ ಮಾವೆ ಸಹಿತ ಪಕ್ಷದ ವಿವಿಧ ಮುಖಂಡರು, ಗ್ರಾಪಂ, ಪುರಸಭೆ ಸದಸ್ಯರು, ವಿವಿಧ ಮೋರ್ಚಾಗಳ ಮುಖಂಡರು ಉಪಸ್ಥಿತರಿದ್ದು ಶುಭ ಹಾರೈಸಿದರು.