ಬಂಟ್ವಾಳ: ಕಾರ್ಯಕರ್ತರ ಹರ್ಷೋದ್ಗಾರದ ನಡುವೆ ರಮಾನಾಥ ರೈ ನಾಮಪತ್ರ ಸಲ್ಲಿಕೆ
ಬಂಟ್ವಾಳ : ಈ ಬಾರಿಯ ವಿಧಾನಸಭಾ ಚುನಾವಣೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಗುರುವಾರ ಭಾರೀ ಜನಸಾಗರದ ನಡುವೆ ಬಂಟ್ವಾಳದಿಂದ ಪಾದಯಾತ್ರೆ ನಡೆಸಿ ನಾಮಪತ್ರ ಸಲ್ಲಿಸಿದರು.
ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಿಂದ ಸಹಸ್ರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆಯಲ್ಲಿ ಅಗಮಿಸಿ ಬಿ.ಸಿ.ರೋಡ್ ಬಸ್ ನಿಲ್ದಾಣದ ಬಳಿ ಸಂಪನ್ನಗೊಂಡಿತು. ಬಳಿಕ ಮಿನಿವಿಧಾನಸೌಧದಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾಧಿಕಾರಿ ಅಬಿಧ್ ಗದ್ಯಾಲ್ ಅವರಿಗೆ ರಮಾನಾಥ ರೈ ಅವರು ನಾಮಪತ್ರ ಸಲ್ಲಿಸಿದರು.
ಇದಕ್ಕು ಮೊದಲು ಬಿ.ಸಿ.ರೋಡ್ ಕೇಂದ್ರ ಭಾಗದಲ್ಲಿ ಜಮಾಯಿಸಿದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ರಮಾನಾಥ ರೈ, ನನ್ನ ಸುಧೀರ್ಘ ಜನಸೇವೆಯ ಜೀವನದಲ್ಲಿ ಒಂಬತ್ತನೇ ಬಾರಿ ಒಂದೇ ಪಕ್ಷದಿಂದ ನಾಮಪತ್ರ ಸಲ್ಲಿಸುತ್ತಿದ್ದೇನೆ. ಎಂತಹುದೇ ಪ್ರತೀಕೂಲ ವಾತಾವರಣದಲ್ಲಿ ನನ್ನ ಜೊತೆ ನಿಂತ ಕಾರ್ಯಕರ್ತರ ಹಾಗೂ ಜನತೆಯ ಋಣವನ್ನು ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ಎಂದರು.
ನನ್ನೊಂದಿಗೆ ಪಾದಯಾತ್ರೆಯಲ್ಲಿ ಭಾಗವಹಿಸಿ, ನನ್ನನ್ನು ಆಶೀರ್ವದಿಸಿದ ತಮಗೆಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದ ರೈ ಅವರು ಅಧಿಕಾರದಲ್ಲಿದ್ದಾಗಲೂ ನಾನು ತಪ್ಪುಗಳನ್ನು ಮಾಡಿಲ್ಲ,ಹಾಗೆಯೇ ಕ್ಷೇತ್ರದ ಜನರಿಗೆ ಅಗೌರವವನ್ನುಂಟು ಮಾಡುವ ಯಾವುದೇ ಕೃತ್ಯವನ್ನು ಮಾಡಿಲ್ಲ ಎಂದರು.
ಈ ಚುನಾವಣೆಯಲ್ಲಿ ಮತದಾರರ ಸಹಕಾರದಿಂದ ಬಂಟ್ವಾಳದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸೋಣ ಎಂದು ಅವರು ಕರೆ ನೀಡಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಂಜೇಶ್ವರ ಶಾಸಕ ಅಶ್ರಫ್, ಕೇರಳದ ನ್ಯಾಯವಾದಿ ಗೋವಿಂದನ್,ಬಿ.ಸಿ.ರೋಡಿನ ನ್ಯಾಯವಾದಿ ಅಶ್ವನಿ ಕುಮಾರ್ ರೈ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ರಮಾನಾಥ ರೈ ನಾಮಪತ್ರ ಸಲ್ಲಿಕೆಯ ವೇಳೆ ಕೆ.ಪಿ.ಸಿ.ಸಿ. ಸದಸ್ಯರುಗಳಾದ ಪಿಯೂಸ್ ಎಲ್. ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಪ್ರಮುಖರಾದ ಬಿ.ಎಚ್. ಖಾದರ್ ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಇದ್ದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ, ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ ಪ್ರಮುಖರಾದ ಎಂ.ಎಸ್. ಮುಹಮ್ಮದ್, ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯಾನ್, ಜನಾರ್ಧನ ಚೆಂಡ್ತಿಮಾರ್, ಅಬ್ಬಾಸ್ ಅಲಿ, ರಾಕೇಶ್ ಮಲ್ಲಿ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಸಪಲ್ಯ, ನ್ಯಾಯವಾದಿ ಸುರೇಶ್ ಬಿ. ನಾವೂರ, ರೈಯವರ ಪತ್ನಿ ಧನಭಾಗ್ಯ ರೈ, ಪುತ್ರಿಚರಿಷ್ಮಾ ರೈ,
ಸಹೋದರಿ ಚೆನ್ನವೇಣಿ ಎಂ. ಶೆಟ್ಟಿ ಮತ್ತು ಪಕ್ಷದ ಎಲ್ಲಾ ಮುಂಚೂಣಿ ಘಟಕದ ಅಧ್ಯಕ್ಷರುಗಳು, ಪ್ರಮುಖರುಗಳು ಉಪಸ್ಥಿತರಿದ್ದರು.
ಬಾಲಕೃಷ್ಣ ಆಳ್ವ ಕೊಡಾಜೆ ನಿರೂಪಿಸಿದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ವಂದಿಸಿದರು.ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ರೈಗಳ ಅಭಿಮಾನಿಗಳು ಹೂ ಮಳೆಗೈದು ಶುಭ ಕೋರಿದರು.
ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಾರ್ಥನೆ : ಮೆರವಣಿಗೆ ಆರಂಭಕ್ಕೂ ಮುನ್ನ ಅಭ್ಯರ್ಥಿ ಬಿ. ರಮಾನಾಥ ರೈಯವರು ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮೊಡಂಕಾಪು ಚರ್ಚ್‍ಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಿತ್ತಬೈಲು ಮೊಯ್ದಿನ್ ಜುಮಾ ಮಸೀದಿ, ಕೆಳಗಿನಪೇಟೆ ಮಸೀದಿಯಲ್ಲೂ ಪ್ರಾರ್ಥಿಸಿದರು. ಆನಂತರ ಬಂಟ್ವಾಳದ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಹೌದು, ಹಳೇ ಮುಖವಾದರೂ ಬಣ್ಣ ಬದಲಿಸಿಲ್ಲ : ರೈ
ಕಾಂಗ್ರೆಸ್ ನಲ್ಲಿ ಒಬ್ಬರೇ ಸ್ಪರ್ಧಿಸುವುದು ಎಂದು ಪ್ರತಿಪಕ್ಷದವರು ಇತ್ತೀಚೆಗೆ ಲೇವಡಿ ಮಾಡಿದ್ದರು. ಅದಕ್ಕೆ ತಿರುಗೇಟು ನೀಡಿದ ರಮಾನಾಥ ರೈ, ಹೌದು, ತಮ್ಮದು ಹಳೇ ಮುಖವಾದರೂ, ತಾವು ಯಾವತ್ತೂ ಬಣ್ಣ ಬದಲಿಸಿಲ್ಲ, ತಮ್ಮದು ಒಂದೇ ಬಣ್ಣ, ಒಂದೇ ಅಂಗಿ, ಒಂದೇ ಚಿಹ್ನೆ, ಒಂದೇ ಸಿದ್ಧಾಂತ, ಒಂದೇ ಪಕ್ಷ, ಒಂದೇ ಧ್ವಜ ಎಂದು ತಿಳಿಸಿದರು.