9 ನೇ ಬಾರಿ ಚುನಾವಣಾ ಸ್ಪರ್ಧೆಗೆ ಅವಕಾಶ: ಪಕ್ಷಕ್ಕೆ ಅಭಾರಿ: ರಮಾನಾಥ. ರೈ
ಬಂಟ್ವಾಳ:ಕಾಂಗ್ರೆಸ್ ಪಕ್ಷದಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರವಾಗಿ ತನಗೆ 9 ಬಾರಿ ಚುನಾವಣಾ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ಪಕ್ಷದ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸುವುದಲ್ಲದೆ ಅವಕಾಶ ನೀಡಿರುವುದು ಅತೀವ ಸಂತೋಷ ಕೂಡ ಆಗಿದೆ ಎಂದು ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ,ಮಾಜಿ ಸಚಿವ ಬಿ.ರಮಾನಾಥ ರೈ ಅವರು ತಿಳಿಸಿದ್ದಾರೆ.
ಬಿ.ಸಿ.ರೋಡಿನಲ್ಲಿರುವ ಪಕ್ಷದ ಚುನಾವಣಾ ಕಚೇರಿಯಲ್ಲಿ ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಚುನಾವಣೆಯಲ್ಲಿ ಅಭಿವೃದ್ದಿಕೆಲಸ ಮಾಡದೆ ನಾನು ಸೋತಿಲ್ಲ, ವಿರೋಧಿಗಳ ಅಪಪ್ರಚಾರದಿಂದ ಸೋಲಾಯಿತು. ಸೋತಿರುವುದಕ್ಕೆ ನನಗೆ ಬೇಸರವಿಲ್ಲ,ಆದರೆ ಸೋಲಿಸಿದ ರೀತಿಗೆ ಮಾತ್ರ ನನಗೆ ಬೇಸರವಿದೆ ಎಂದು ಹೇಳಿದರು .
ಈ ಚುನಾವಣೆಯಲ್ಲಿ ಕ್ಷೇತ್ರದ ಜನತೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದ ಅವರು,ನನ್ನ ಶಾಸಕತ್ವದ ಸಂದರ್ಭದಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಅನೇಕ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಳ್ಳುವ ಮೂಲಕ ಜಿಲ್ಲೆಯಲ್ಲೇ ಮಾದರಿ ಕ್ಷೇತ್ರವಾಗಿ ಗುರುತಿಸಲ್ಪಡುವಂತಾಗಿದೆ ಎಂದು ಅವರು ತಿಳಿಸಿದರು.
ಸಿದ್ದ ರಾಮಯ್ಯ ಮುಖ್ಯಮಂತ್ರಿ ಯಾಗಿದ್ದಾಗ ಬಿ.ಸಿ.ರೋಡಿನ ಕಸದಕೊಂಪೆಯಂತಿದ್ದ ಪ್ರದೇಶದಲ್ಲಿ ಸುಂದರ ಉದ್ಯಾನವನ , ಮಿನಿವಿಧಾನಸೌಧ, ಕೆ.ಎಸ್.ಆರ್.ಟಿ.ಸಿ.,ಪ್ರವಾಸಿ ಮಂದಿರ,ಮೆಸ್ಕಾಂ ಸೇರಿದಂತೆ ಬಹುತೇಕ ಕಚೇರಿಗಳಿಗೆ ಕಟ್ಟಡವನ್ನು ಒದಗಿಸಲಾಗಿದೆ.ಪಂಜೆ ಮಂಗೇಶರಾಯರ ಭವನ,ಅಂಬೇಡ್ಕರ್ ಭವನ,ಕ್ರೀಡಾಂಗಣ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ಹಲವಾರು ಕಾಮಗಾರಿ ಇನ್ನು ಅಪೂರ್ಣ ಸ್ಥಿತಿಯಲ್ಲಿದ್ದು,ಇದನ್ನು ಅದ್ಯತೆಯ ನೆಲೆಯಲ್ಲಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ಪಿ.ಡಿ.ಎಲ್.ಡಿ.ಬ್ಯಾಂಕ್ ನ ಮೂಲಕ ರಾಜಕೀಯ ಪ್ರವೇಶ ಮಾಡಿದ ಬಳಿಕ ಸಾಮಾಜಿಕ ಬದುಕಿನಲ್ಲಿ ಹಂತ,ಹಂತವಾಗಿ ಪಕ್ಷದ ಜವಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿದ್ದೇನೆ.ಇದೀಗ ಜಿಲ್ಲೆಯಲ್ಲಿಯೇ ಅತಿಹೆಚ್ಚು ಅಂದರೆ 9 ನೇ ಬಾರಿಗೆ ಸ್ಪರ್ಧಿಸಲು ಪಕ್ಷ ಅವಕಾಶ ಕಲ್ಪಿಸಿದೆ ಎಂದರು.
ಎ.20 ಕ್ಕೆ ನಾಮಪತ್ರ : ಬಿ.ರಮಾನಾಥ ರೈ
ಎ.20 ರಂದು ಗುರುವಾರ 12.35 ಕ್ಕೆ ನಾನು ನಾಮಪತ್ರ ಸಲ್ಲಿಸಲಿದ್ದೇನೆ. ಅದಕ್ಕೂ ಮೊದಲು ಬಂಟ್ವಾಳ ಶ್ರೀ ವೆಂಕಟರಮಣ ದೇವಾಲಯದಿಂದ ಬೆಳಿಗ್ಗೆ 9 ಗಂಟೆಗೆ ಪೂಜೆ ಸಲ್ಲಿಸಿ ಅ ಬಳಿಕ ಮೆರವಣಿಗೆ ಮೂಲಕ ಬಿ.ಸಿ.ರೋಡಿಗೆ ಬಂದು ಆಡಳಿತ ಸೌಧದ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದೇನೆ. ಅಂದು ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿಕುಂದರ್, ಸುದೀಪ್ ಶೆಟ್ಟಿ, ಪ್ರಮುಖರಾದ ಪಿಯೂಸ್ ಎಲ್. ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಜಯಂತಿ ಪೂಜಾರಿ, ಪದ್ಮಶೇಖರ್ ಜೈನ್ ಮಾಯಿಲಪ್ಪ ಸಾಲ್ಯಾನ್,ಅಬ್ಬಾಸ್ ಆಲಿ, ಮಹಮ್ಮದ್ ಶರೀಫ್, ಜನಾರ್ದನ ಚೆಂಡ್ತಿಮಾರ್, ಸುಭಾಶ್ಚಂದ್ರ ಶೆಟ್ಟಿ,ಉಮೇಶ್ ಸಪಲ್ಯ,ಸುರೇಶ್ ಕುಲಾಲ್, ಸಂಜೀವ ಪೂಜಾರಿ, ನಾರಾಯಣ ನಾಯ್ಕ್ ,ವಾಸು ಪೂಜಾರಿ, ಸಿದ್ದೀಕ್ ಬೊಗೋಡಿ ಮತ್ತಿತರರು ಉಪಸ್ಥಿತರಿದ್ದರು.