ಬಂಟ್ವಾಳ: ‘ಉಸ್ನೆಯ ಹಿರುಟ’ ಅಪರೂಪದ ಕಲ್ಲು ಹೂವು ಪ್ರಭೇದ ಮುಳ್ಳಯ್ಯನಗಿರಿಯಲ್ಲಿ ಗುರುತು
ಬಂಟ್ವಾಳ:ಇಲ್ಲಿನ ಎಸ್.ವಿ.ಎಸ್.ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಿನಾಯಕ್ ಕೆ.ಎಸ್. ನೇತೃತ್ವದ ಸಂಶೋಧನಾ ತಂಡದಿಂದ ‘ಉಸ್ನೆಯ ಹಿರುಟ’ ಎಂಬ ಅಪರೂಪದ ಕಲ್ಲು ಹೂವು ಪ್ರಭೇದ ಮುಳ್ಳಯ್ಯನಗಿರಿಯಲ್ಲಿ ಗುರುತಿಸಲಾಗಿದೆ. ಇದು ಭಾರತದಲ್ಲೇ ಮೊದಲ ಬಾರಿಗೆ ಗುರುತಿಸಲಾದ ಪ್ರಭೇದ ಎಂದು ಅವರು ತಿಳಿಸಿದ್ದಾರೆ.
ಇದು ಪಾರ್ಮಿಲಿಯ ಎಂಬ ಕಲ್ಲು ಹೂವಿನ ಕುಟುಂಬಕ್ಕೆ ಸೇರಿದ್ದು, ೧೫೦೦ ಅಡಿಗಿಂತ ಎತ್ತರ ಪ್ರದೇಶದಲ್ಲಿ ಮಾತ್ರ ಕಾಣಸಿಗುತ್ತದೆ. ಪಾಚಿ ಮತ್ತು ಶಿಲೀಂಧ್ರಗಳ ಸಹಯೋಗದಿಂದ ಮಾತ್ರ ಉತ್ಪತ್ತಿಯಾಗುತ್ತಿದ್ದು, ವಾತಾವರಣದ ಮಾಲಿನ್ಯಕ್ಕೆ ಬೇಗ ನಶಿಸಿಹೋಗುವ ಮತ್ತು ಕಡಿಮೆ ಮಾಲಿನ್ಯ ಇರುವ ಪ್ರದೇಶದಲ್ಲಿ ಮಾತ್ರ ಅಪರೂಪವಾಗಿ ಕಾಣಲು ಸಿಗುತ್ತದೆ.
ಫಿಲಿಫೈನ್ಸ್, ಆಸ್ಟ್ರೇಲಿಯಾ, ಕ್ಯಾಲಿಪೋರ್ನಿಯ, ಪಶ್ಚಿಮ ಆಫ್ರಿಕಾ ಮತ್ತಿತರ ದೇಶದಲ್ಲಿ ಮಾತ್ರ ಕಾಣಲು ಸಿಗುವ ಈ ಕಲ್ಲು ಹೂವಿನ ಬಗ್ಗೆ ಜನರಲ್ ಆಫ್ ತ್ರಿಟನ್ ಟ್ಯಾಕ್ಸ್ ಎಂಬ ವಿಜ್ಞಾನ ಪತ್ರಿಕೆ ಫೆಬ್ರವರಿ ತಿಂಗಳು ವಿಶೇಷ ಆವೃತ್ತಿಯಲ್ಲಿ ಲೇಖನ ಪ್ರಕಟವಾಗಿದೆ. ದೇಶದಲ್ಲಿ ಇಂತಹ ಒಟ್ಟು ೫೭, ರಾಜ್ಯದಲ್ಲಿ ೮ ಕಲ್ಲು ಹೂಗಳ ಪ್ರಭೇದ ಗುರುತಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.