ಮಂಗಳೂರು: ನಗರದ ಕದ್ರಿಯಲ್ಲಿರುವ ಶಿಲ್ಪಾ ಜ್ಯುವೆಲ್ಲರ್ಸ್ ನಲ್ಲಿ ಸೇಫ್ ಲಾಕರ್ ಒಡೆದು ಚಿನ್ನಾಭರಣ ಕಳ್ಳತನ ನಡೆಸಿರುವ ಘಟನೆ ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ. ಕಳ್ಳರು ಸೇಫ್ ಲಾಕರ್ ಒಡೆಯಲು ತಂದಿದ್ದ ಗ್ಯಾಸ್ ಕಟ್ಟರ್ ಕೈಕೊಟ್ಟ ಕಾರಣ ಭಾರೀ ದರೋಡೆ ತಪ್ಪಿದ್ದರೂ ಅಲ್ಪಸ್ವಲ್ಪ ಚಿನ್ನಾಭರಣಗಳೊಂದಿಗೆ ಗ್ಯಾಸ್ ಕಟ್ಟರ್ ಅನ್ನು ಸ್ಥಳದಲ್ಲೇ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ.
ಶಿಲ್ಪಾ ಜ್ಯುವೆಲ್ಲರ್ಸ್ ಮಳಿಗೆಯ ಪಕ್ಕದ ಲೈಫ್ ಸ್ಟೈಲ್ ಮೆನ್ಸ್ ಬ್ಯೂಟಿ ಪಾರ್ಲರ್ ಗೋಡೆಯ ಮೂಲಕ ದೊಡ್ಡದಾದ ಕನ್ನ ಕೊರೆದು ಜ್ಯುವೆಲ್ಲರ್ಸ್ ಒಳಪ್ರವೇಶಿಸಿದ ಕಳ್ಳರು ಸೇಫ್ ಲಾಕರ್ ಮುರಿಯಲು ಯತ್ನಿಸಿದ್ದಾರೆ. ಸೇಫ್ ಲಾಕರ್ ಕೆಳಭಾಗ ಕೊರೆಯುವಷ್ಟರಲ್ಲಿ ಗ್ಯಾಸ್ ಕಟ್ಟರ್ ಫ್ಯೂಸ್ ಹಾಳಾಗಿದೆ. ಕಳ್ಳರು ಲಾಕರ್ ಒಡೆಯಲು ವಿಫಲಯತ್ನ ನಡೆಸಿ ಅಲ್ಲಿದ್ದ ಇತರ ಚಿನ್ನ, ಬೆಳ್ಳಿಯ ಆಭರಣ ದರೋಡೆ ಮಾಡಿದ್ದಾರೆ.
ಜ್ಯುವೆಲ್ಲರ್ಸ್ ಮಾಲಕ ನಾರಾಯಣ ಆಚಾರ್ಯ ಅವರು ಘಟನೆಯ ಸಂಬಂಧ ಕದ್ರಿ ಠಾಣೆಗೆ ದೂರು ನೀಡಿದ್ದಾರೆ. ಕಳವಾಗಿರುವ ಚಿನ್ನಾಭರಣಗಳ ಮೌಲ್ಯ ಇನ್ನಷ್ಟೇ ತಿಳಿದುಬರಬೇಕಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿದ್ದು ತನಿಖೆ ಮುಂದುವರಿದಿದೆ.



