Published On: Fri, Jan 27th, 2023

3 ಕೋಟಿ 73 ಲಕ್ಷ ರೂಪಾಯಿ ವೆಚ್ಚದ ಘನ ತ್ಯಾಜ್ಯ ನಿರ್ವಹಣಾ ಕೇಂದ್ರ ಉದ್ಘಾಟನೆ

ಕೈಕಂಬ:ಬಂಟ್ವಾಳ, ಮೂಲ್ಕಿ, ಮಂಗಳೂರು ಮತ್ತು ಮೂಡಬಿದ್ರಿ ತಾಲೂಕುಗಳ 51 ಗ್ರಾಮ ಪಂಚಾಯತ್ ಗಳ ಒಟ್ಟು 99 ಗ್ರಾಮಗಳ ಘನ ತ್ಯಾಜ್ಯ ಸಮಸ್ಯೆಗೆ ಪರಿಹಾರ ಒದಗಿಸುವ ಮಹತ್ವಾಕಾಂಕ್ಷೆಯ, ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ)ಯೋಜನೆಯಡಿಯಲ್ಲಿ,ಕೇಂದ್ರ ಮತ್ತು ರಾಜ್ಯ ಸರಕಾರಗಳ ಒಟ್ಟು 3 ಕೋಟಿ 73 ಲಕ್ಷ ರೂಪಾಯಿ ವೆಚ್ಚದಲ್ಲಿ ಮಂಗಳೂರು ತಾಲೂಕಿನ ತೆಂಕ ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ರಿ0ಡೇಲ್ ಎಂಬಲ್ಲಿ  6 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಪ್ರಥಮ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರ (ಎಂ.ಆರ್. ಎಫ್.-ಮೆಟಿರಿಯಲ್ ರಿಕವರಿ ಫೆಸಿಲಿಟಿ)ದ ಉದ್ಘಾಟನೆ ಗುರುವಾರ ನಡೆಯಿತು.

*MRF ಘಟಕ ಉದ್ಘಾಟನೆ

ಘಟಕವನ್ನು ಉದ್ಘಾಟಿಸಿ ಮಾತನಾಡಿದ ಇಂಧನ ಹಾಗೂ  ಕನ್ನಡ ಮತ್ತು ಸಂಸ್ಕೃತಿ  ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಎಷ್ಟು ಸೇತುವೆಗಳು, ರಸ್ತೆಗಳು ನಿರ್ಮಾಣ ಆಗಿವೆ ಎನ್ನುವುದಕ್ಕಿಂತ ಸ್ವಚ್ಛತೆಗಾಗಿ ಇಂತಹ ಘಟಕ ನಿರ್ಮಾಣ ಆಗಿರುವುದು ದೊಡ್ಡ ಅಭಿವೃದ್ಧಿ ಕಾರ್ಯವಾಗಿದೆ.ನಮ್ಮಿಂದ ಉತ್ಪತ್ತಿಯಾದ ಕಸವನ್ನು ಹೇಗೆ ವಿಲೇವಾರಿ ಮಾಡಬೇಕು ಎನ್ನುವುದನ್ನು ನಾವೇ ಗಂಭೀರವಾದ ಆಲೋಚನೆ ಮಾಡಬೇಕು, ನಮ್ಮ ಗ್ರಾಮವನ್ನು ಸ್ವಚ್ಛವಾಗಿಡುವ ಸಂಕಲ್ಪ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಕನಸು ನನಸು ಮಾಡಲು ಜತೆಯಾಗಬೇಕು. ದೊಡ್ಡ ಯೋಜನೆಗಳು ಆರಂಭದಲ್ಲಿ ವಿರೋಧ ಬರುವುದು ಸಹಜ ನನ್ನ ಮನೆಯ ಪಕ್ಕದಲ್ಲಿ ಇಂತಹ ಘಟಕ ನಿರ್ಮಾಣ ಮಾಡುವ ಸಂಧರ್ಭದಲ್ಲಿ ಕೂಡಾ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು, ಆದರೆ ಯೋಜನೆಯ ಬಗ್ಗೆ ಸರಿಯಾದ ಮಾಹಿತಿ ನೀಡುವುದು ಅವಶ್ಯ.ಗ್ರಾಮಸ್ಥರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಈ ಘಟಕ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ನೋಡಲು ಅವಕಾಶ ಮಾಡಿಕೊಡಬೇಕು ಎಂದರು.

*ಸ್ವಚ್ಚತಾ ರಥ ಚಾಲನೆ

ಎಂಸಿಎಫ್ ಸಂಸ್ಥೆಯ ಸಿಇಆರ್ ನಿಧಿಯಡಿ ನೀಡಲಾದ ಸ್ವಚ್ಛವಾಹಿನಿಯನ್ನು ಹಸ್ತಾಂತರಿಸಿ ಮತ್ತು ಎಂಆರ್ ಎಫ್ ಕುರಿತ ಮಾಹಿತಿ ಒಳಗೊಂಡ ಸ್ವಚ್ಛತಾ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್,ಒಂದು ಪರಿವರ್ತನೆ ಯುಗ ಪ್ರಾರಂಭವಾಗಿದೆ ಪ್ರಧಾನಿ ನರೇಂದ್ರ ಮೋದಿಯವರ ಇಚ್ಚಾಶಕ್ತಿಯ ಕಾರ್ಯ ಸ್ವಚ್ಛ ಭಾರತವಾಗಿದೆ. ಈಗ ಕ್ರಿಸ್ತ ಶಕ, ಕ್ರಿಸ್ತ ಪೂರ್ವ ಇರುವಂತೆ ಮುಂದೆ ಅಭಿವೃದ್ಧಿಯ ವಿಚಾರದಲ್ಲಿ ಮೋದಿಯವರ ಆಡಳಿತದ ಪೂರ್ವ  ಮತ್ತು ನಂತರ ಎಂದು ಉಲ್ಲೇಖವಾಗಲಿದೆ. ಗಾಂಧೀಜಿ ಕಂಡ ಕನಸಿನಂತೆ ಸ್ವಚ್ಛ ಭಾರತದ ಜತೆಯಲ್ಲಿ ದೇಶದ ಅಭಿವೃದ್ಧಿ ಆಗಬೇಕು ಎನ್ನುವುದು ಮೋದಿಯವರ ಕನಸಾಗಿದೆ, ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶದ ಹಿತಾಸಕ್ತಿಯ ರಕ್ಷಣೆಗಾಗಿ ಒಂದು ಹೊತ್ತಿನ ಊಟವನ್ನು ತ್ಯಾಗ ಮಾಡುವಂತೆ ದೇಶವಾಸಿಗಳಿಗೆ ನೀಡಿದ್ದ ಕರೆಗೆ ಅಂದು ಭಾರತೀಯರು ಯಾವ ರೀತಿ ಸ್ಪಂದನೆ ನೀಡಿದ್ದರೋ ಅದೇ ರೀತಿಯಲ್ಲಿ ಮೋದಿಯವರು ನೀಡಿದ  ಸ್ವಚ್ಛ ಭಾರತ ಕರೆಗೆ ಇಂದು ಭಾರತೀಯರು ಜಾತಿ, ಮತ, ಧರ್ಮ ಭೇಧವಿಲ್ಲದೆ  ಸ್ಪಂದಿಸಿದ್ದಾರೆ.ತ್ಯಾಜ್ಯ ಘಟಕಗಳ ಬಗ್ಗೆ ಜನರಲ್ಲಿ ಜಾಗ್ರತಿ ಇಲ್ಲದೇ ಇರುವುದರಿಂದ ತ್ಯಾಜ್ಯ ಘಟಕಗಳಿಗೆ ವಿರೋಧ ವ್ಯಕ್ತವಾಗುತ್ತಿದೆ, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಅಧ್ಯಕ್ಷತೆಯನ್ನು ಶಾಸಕ ಡಾ. ಭರತ್ ಶೆಟ್ಟಿ ವಹಿಸಿ ಮಾತನಾಡಿದ ಅವರು ತ್ಯಾಜ್ಯ ಘಟಕದ ಬಗ್ಗೆ ಯಾರಿಗಾದರೂ ಅನುಮಾನವಿದ್ದರೆ ಅಂತಹವರಿಗೆ ಘಟಕದ ಕಾರ್ಯ ನಿರ್ವಹಣೆಯನ್ನು ವೀಕ್ಷಿಸಲು ಅವಕಾಶ ಮಾಡಿಕೊಡಬೇಕು, ಅದರಲ್ಲೂ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳೀಯರಿಗೆ ಅವಕಾಶ ಮಾಡಿ ಕೊಟ್ಟಲ್ಲಿ ಪ್ಲಾಸ್ಟಿಕ್ ಉಪಯೋಗ ಮಾಡುವುದನ್ನು ಕಡಿಮೆ ಮಾಡಲು ಅರಿವು ಮೂಡಿಸಲು ಸಾಧ್ಯ. ಈ ಘಟಕ ಮುಂದಿನ ಒಂದು ವರ್ಷದ ಒಳಗೆ ಸಂಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇಲ್ಲಿ ಹಸಿ ಕಸವನ್ನು ಯಾವುದೇ ಕಾರಣಕ್ಕೂ ಇಲ್ಲಿಗೆ ತರುವುದಿಲ್ಲ ಕೇವಲ ಒಣ ಕಸವನ್ನು ಇಲ್ಲಿಗೆ ತಂದು ವಿಂಗಡಣೆ ಮಾಡಿ ಇಲ್ಲಿಂದ ಸಾಗಿಸಲಾಗುತ್ತದೆ ಈ ಬಗ್ಗೆ ಜನರಿಗೆ ಯಾವುದೇ ಅನುಮಾನ, ಆತಂಕ ಬೇಡ ಎಂದರು.ಎಂಸಿಎಫ್ ನಿಂದ ಕೊಡಮಾಡಿದ ವಾಹನದ ಕೀಲಿ ಕೈಯನ್ನು ಮತ್ತು ರೆಡ್ ಕ್ರಾಸ್ ಸಂಸ್ಥೆಗೆ ನೀಡಲಾದ 25 ಲಕ್ಷ ನಿಧಿಯನ್ನು ವೇದಿಕೆಯಲ್ಲಿ ಹಸ್ತಾಂತರಿಸಲಾಯಿತು.

ಘಟಕ ನಿರ್ಮಾಣಕ್ಕೆ ಸಹಕರಿಸಿದ ಬೆಂಗಳೂರಿನ ಸಹಾಸ್ ಸಂಸ್ಥೆಯ ಸಿಇಓ ಅರ್ಚನಾ ತ್ರಿಪಾಠಿ, ಎಡಪದವು ಪಂಚಾಯತ್ ಅಧ್ಯಕ್ಷ ಸುಕುಮಾರ್ ದೇವಾಡಿಗ, ಎಂಸಿಎಫ್ ನ ಪ್ರೊಡಕ್ಷನ್ ಮ್ಯಾನೇಜರ್ ಎಸ್. ಗಿರೀಶ್, ಮತ್ತು ಕಟ್ಟಡ ನಿರ್ಮಾಣ ಗುತ್ತಿಗೆದಾರ ಅನಿಜುಲ್ ರೆಹಮಾನ್ ಕಲ್ಲಾಪು ಇವರುಗಳನ್ನು ಸಚಿವರು, ಶಾಸಕರು ಶಾಲು ಹೊದೆಸಿ ಗೌರವಿಸಿದರು.

ದ.ಕ. ಜಿಲ್ಲಾಧಿಕಾರಿ ರವಿಕುಮಾರ್, ಎಂ. ಆರ್., ಅಪರ ಜಿಲ್ಲಾಧಿಕಾರಿ ಕೃಷ್ಣ ಮೂರ್ತಿ, ಸಹಾಯಕ ಆಯುಕ್ತ ಮದನ್ ಮೋಹನ್, ಪಂಚಾಯತ್ ಉಪಾಧ್ಯಕ್ಷೆ ಪ್ರೇಮಾ, ಸದಸ್ಯರುಗಳಾದ ಅನಸೂಯ, ಗುಣಪಾಲ ನಾಯ್ಕ್, ಕುಸುಮಾವತಿ,ಮಂಗಳಾ ರಿಸೋರ್ಸ್ ಮ್ಯಾನೇಜ್ಮೆಂಟ್ ಸಂಸ್ಥೆಯ ದಿಲ್ ರಾಜ್ ಆಳ್ವ ಮೊದಲಾದವರು ವೇದಿಕೆಯಲ್ಲಿದ್ದರು. ವಿವಿಧ ಗ್ರಾಮ ಪಂಚಾಯತ್ ಗಳ ಅಧ್ಯಕ್ಷರುಗಳು, ಸದಸ್ಯರುಗಳು, ಅಧಿಕಾರಿಗಳು, ಪಂಚಾಯತ್ ಗಳ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿವರ್ಗ, ಶಾಲಾ ವಿದ್ಯಾರ್ಥಿಗಳು, ಮೆಸ್ಕಾಂ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.      ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಸ್ವಾಗತಿಸಿದರು.ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ದ.ಕ. ಜಿಲ್ಲಾ ಸಂಯೋಜಕ ನವೀನ್ ನಿರೂಪಿಸಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ನರೇಂದ್ರ ಬಾಬು ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter