ಬಂಟ್ವಾಳ: ಗ್ರಾಮವಿಕಾಸಯಾತ್ರೆ ಜೊತೆ ವಿಜಯ ಸಂಕಲ್ಪ ಅಭಿಯಾನ’
ಬಂಟ್ವಾಳ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ಜ.21ರಿಂದ 29 ರವರೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ‘ವಿಜಯ ಸಂಕಲ್ಪ ಅಭಿಯಾನ’ ಆಯೋಜಿಸಲಾಗಿದೆ ಎಂದು ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ ತಿಳಿಸಿದ್ದಾರೆ.
ಗುರುವಾರ ರಾತ್ರಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆದ ಗ್ರಾಮವಿಕಾಸ ಯಾತ್ರೆ- ಗ್ರಾಮದೆಡೆಗೆ ಶಾಸಕರ ನಡಿಗೆಯ 6 ನೇ ದಿನದ ಪಾದಯಾತ್ರೆಯು ಬಾಳ್ತಿಲಗ್ರಾಮದ ನೀರಪಾದೆ ಶ್ರೀಕುಂದಾಯ ರಕ್ತೇಶ್ವರಿ ಮಹಮ್ಮಾಯಿ ದೈವಸ್ಥಾನದ ಬಳಿ ಸಂಪನ್ನಗೊಂಡ ಬಳಿಕ ಕರೆದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಕೇಂದ್ರ ಮತ್ತು ರಾಜ್ಯ ಸರಕಾರದ ಜನಪರ ಯೋಜನೆ,ಅಭಿವೃದ್ಧಿ ಕಾರ್ಯಗಳ ವಿವರವನ್ನು ಹಾಗೂ ಶಾಸಕ ರಾಜೇಶ್ ನಾಯ್ಕ್ ಅವರು ತಮ್ಮ ಶಾಕತ್ವದ ಅವಧಿಯಲ್ಲಿ ಮಾಡಿರುವ ಸಾಧನೆಯನ್ನು ಕರಪತ್ರದ ಮೂಲಕ ಈ ಸಂದರ್ಭ ಮನೆ ಮನೆಗೆ ತಲುಪಿಸಲಾಗುವುದು ಎಂದರು.
ಜ21ರಂದು ಮಣಿನಾಲ್ಕೂರು ಗ್ರಾಮದಲ್ಲಿ ಆರಂಭವಾಗುವ ಶಾಸಕರ ಗ್ರಾಮವಿಕಾಸ ಯಾತ್ರೆಯಲ್ಲೆ ಅಭಿಯಾನಕ್ಕೆ ಶಾಸಕರು ಚಾಲನೆ ನೀಡಲಿದ್ದಾರೆ, ಬಂಟ್ವಾಳ ಕ್ಷೇತ್ರದ 10 ವಿಭಾಗಗಳಲ್ಲಿ 8 ಮಹಾಶಕ್ರಿಕೇಂದ್ರಗಳು,59 ಶಕ್ತಿ ಕೇಂದ್ರಗಳು, 249 ಬೂತ್ ಗಳಲ್ಲಿ ಪಕ್ಷದ ಕಾರ್ಯಕರ್ತರು ಮನೆ,ಮನೆ ಭೇಟಿ ನೀಡಲಿದ್ದಾರೆ ಎಂದರು.
ಕ್ಷೇತ್ರದಲ್ಲಿ ಒಂದೂವರೆ ಲಕ್ಷಕ್ಕು ಅಧಿಕ ಮತದಾರರನ್ನು ಹಾಗೂ 40 ಸಾವಿರಕ್ಕು ಅಧಿಕ ಫಲಾನುಭವಿಗಳನ್ನು ಸಂಪರ್ಕಿಸಲು ನಿರ್ಧರಿಸಲಾಗಿದ್ದು, ಆಮೂಲಕ ಮುಂದಿನ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರವನ್ನು ಮತ್ತೆ ಬಿಜೆಪಿ ಗೆಲ್ಲುವ ಗುರಿ ಹೊಂದಲಾಗಿದೆ ಎಂದು ಹೇಳಿದ ಅಧ್ಯಕ್ಷ ದೇವಪ್ಪ ಪೂಜಾರಿ ಅವರು ಈ ನಿಟ್ಟಿನಲ್ಲಿ ವಿವಿಧ ಕಾರ್ಯ ತಂತ್ರ ರೂಪಿಸಲಾಗುತ್ತಿದೆ ಎಂದರು.
ಈ ಅಭಿಯಾನದ ಯಶಸ್ಸಿಗೆ 21ಮಂದಿಯ ಪ್ರಮುಖರ ತಂಡ ಕಾರ್ಯಪ್ರವೃತವಾಗಿದೆಯಲ್ಲದೆ ಸುದರ್ಶನ್ ಬಜ ಸಂಚಾಲಕತ್ವದಲ್ಲಿ ಯಶೋಧರಕರ್ಬೆಟ್ಟು,ವಜ್ರನಾಥ ಕಲ್ಲಡ್ಕ,ಪ್ರಕಾಶ್ ಅಂಚನ್,ಕಮಾಲಾಕ್ಷಿ ಪೂಜಾರಿಯವರ ಸಹಸಂಚಾಲಕತ್ವದ ಸಮಿತಿಯನ್ನು ರಚಿಸಲಾಗಿದೆ ಎಂದರು.
ಅಭಿಯಾನದಲ್ಲಿ ಸರಕಾರದ ಸಾಧನೆ, ಅಭಿವೃದ್ಧಿ ಕಾರ್ಯಗಳ ಕರಪತ್ರ ಹಂಚಿಕೆ, ಬ್ಯಾನರ್ ಅಳವಡಿಕೆ, ಗೋಡೆಬರಹ,ನಮ್ಮ ಮನೆ ಬಿಜೆಪಿ ಮನೆ ಸಿಕ್ಕರ್ ಅಂಟಿಸುವುದು ಮುಂತಾದ ಕಾರ್ಯಗಳ ಮೂಲಕ ಬಿಜೆಪಿಗೆ ಪೂರಕ ವಾತಾವರಣ ಸೃಷ್ಟಿ ಮಾಡಲಾಗುವುದು ಎಂದರು.
50 ಸಾವಿರ ಗುರಿ:
ಈ ಸಂದರ್ಭ ಬಂಟ್ವಾಳ ಕ್ಷೇತ್ರದಲ್ಲಿ ಪಕ್ಷಕ್ಕೆ 50 ಸಾವಿರ ಸದಸ್ಯರನ್ನಾಗಿಸುವ ಗುರಿಯನ್ನು ಹೊಂದಲಾಗಿದೆ.ಮಿಸ್ ಕಾಲ್ ನೀಡುವ ಮೂಲಕ ಬಿಜೆಪಿ ಸದಸ್ಯತ್ವ ಪಡೆಯಬಹುದು ಎಂದ ಅವರು ಜ.29ರಂದು ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ ಕಾರ್ಯಕ್ರಮವನ್ನು ಎಲ್ಲ ಬೂತ್‌ಗಳಲ್ಲಿ ವೀಕ್ಷಿಸಲಾಗುವುದು. ಇದಕ್ಕಾಗಿ ಶೇ.90 ಬೂತ್ ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,ಮಾಜಿ ಶಾಸಕರಾದ ರುಕ್ಮಯಪೂಜಾರಿ,ಪದ್ಮನಾಭ ಕೊಟ್ಟಾರಿ,ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ ,ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ಮಾಧವಮಾವೆ, ಡೊಂಬಯ ಅರಳ,ರವೀಶ್ ಶೆಟ್ಟಿ,ಸುದರ್ಶನ್ ಬಜ,ವಜ್ರನಾಥ ಕಲ್ಲಡ್ಕ,ಚೆನ್ನಪ್ಪ ಆರ್ .ಕೋಟ್ಯಾನ್ ಮೊದಲಾದವರಿದ್ದರು.