ಬಂಟ್ವಾಳ:ಜ.22-29 ವರೆಗೆ ಸದ್ಗುರು ನಿತ್ಯಾನಂದ,ಗೋವಿಂದ ಸ್ವಾಮಿ ಮಂದಿರದ ಲೋಕಾರ್ಪಣೆ, ಪಂಚಲೋಹದ ವಿಗ್ರಹ ಪ್ರತಿಷ್ಠೆ ಹಾಗೂ ಉಚಿತ ಸಾಮೂಹಿಕ ವಿವಾಹ ಸಮಾರಂಭ
ಬಂಟ್ವಾಳ: ಇಲ್ಲಿನ ಬೈಪಾಸ್ ನಿತ್ಯಾನಂದ ನಗರದಲ್ಲಿ ಸುಮಾರು 2 ಕೋ.ರೂ.ವೆಚ್ಚದಲ್ಲಿ ವಿನೂತನ ಶೈಲಿಯಲ್ಲಿ ಸುಂದರವಾಗಿ ನಿರ್ಮಾಣಗೊಂಡಿರುವ ಶ್ರೀ ಸದ್ಗುರು ನಿತ್ಯಾನಂದ,ಗೋವಿಂದ ಸ್ವಾಮಿ ಮಂದಿರದ ಲೋಕಾರ್ಪಣೆ, ಶ್ರೀಗುರುವರ್ಯರ ಪಂಚಲೋಹದ ವಿಗ್ರಹ ಪ್ರತಿಷ್ಠಾ ಮಹೋತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹ ಸಮಾರಂಭ ಜ.22 ರಿಂದ ಜ.29 ರವರೆಗೆ ನಡೆಯಲಿದೆ.
ಮಂಗಳವಾರ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಬಿ.ದಿನೇಶ್ ಭಂಡಾರಿ ಅವರು,ನಿತ್ಯಾನಂದ ನಗರದ ಶ್ರೀ ಸದ್ಗುರು ನಿತ್ಯಾನಂದ,ಗೋವಿಂದ ಸ್ವಾಮಿ ಮಂದಿರಕ್ಕೆ ಸುವರ್ಣ ಮಹೋತ್ಸವ ಹಾಗೂ ಸದ್ಗುರು ಶ್ರೀ ಭಗವಾನ್ ನಿತ್ಯಾಂದರು ಬಂಟ್ವಾಳಕ್ಕೆ ಪಾದಸ್ಪರ್ಶಗೈದು ಈ ವರ್ಷ 100 ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ‘ಶತಮಾನೋತ್ಸವ ಸಂಭ್ರಮ’ ವನ್ನು ಒಟ್ಟಾಗಿ ಆಚರಿಸುವ ಭಾಗ್ಯ ಒದಗಿ ಬಂದಿದೆ ಎಂದರು.
ಇಜ್ಜ ಶಿವಕ್ಷೇತ್ರದ ಸತ್ಯನಾರಾಯಣ ಭಟ್ ಅವರ ನೇತೃತ್ವದಲ್ಲಿ ತಂತ್ರಿವರ್ಯರಾದ ವೇ.ಮೂ. ನಾರಾಯಣ ಭಟ್ ಕೊರೆಕ್ಕಾನ ಇವರ ಮಾರ್ಗದರ್ಶನ ದಲ್ಲಿ ನೂತನ ಮಂದಿರದ ಲೋಕಾರ್ಪಣೆ, ಶ್ರೀಗುರುವರ್ಯರ ಪ್ರತಿಷ್ಠಾ ಕಾರ್ಯ,ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದ್ದು,8 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದ ಪ್ರತಿದಿನ ವಿವಿಧ ವೈಧಿಕ ವಿಧಿವಿಧಾನಗಳು,ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು,ಅನ್ನಸಂತರ್ಪಣೆ ನಡೆಲಿದೆ.
22 ರಂದು ಹೊರೆಕಾಣಿಕೆ:
ಜ. 22 ರಂದು ಮಧ್ಯಾಹ್ನ 2.30 ಕ್ಕೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದ ವಠಾರದಿಂದ ಶ್ರೀ ಗುರುದ್ವಯರ ವಿಗ್ರಹ ಮತ್ತು ಹಸಿರುವಾಣಿ ಮೆರವಣಿಗೆಯು ನಡೆಯಲಿದೆ. ಶಾಸಕ ರಾಜೇಶ್ ನಾಯ್ಕ್ ಅವರು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಉಪಸ್ಥಿತರಿರುವರು ಎಂದರು.
ಜ.25 ರಂದು ನಡೆಯುವ ಧಾರ್ಮಿಕ ಸಭೆಯಲ್ಲಿ ಕನ್ಯಾಡಿ ಶ್ರೀ ರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ,ಬೇವಿನಕೊಪ್ಪ ಆನಂದಾಶ್ರಮದ ಶ್ರೀ ವಿಜಯಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು,ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಹಲವಾರು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಜ. 26 ರಂದು ಬೆಳಿಗ್ಗೆ ಒಂದೇ ಗರ್ಭಗುಡಿಯಲ್ಲಿ ಅವಧೂತ ಪರಂಪರೆಯಲ್ಲಿ ಗುರು-ಶಿಷ್ಯರಾದ ಶ್ರೀನಿತ್ಯಾನಂದ ಮತ್ತು ಶ್ರೀ ಗೋವಿಂದ ಸ್ವಾಮಿಯವರ ಪಂಚಲೋಹದ ವಿಗ್ರಹದ ಪ್ರತಿಷ್ಟೆ,ಬ್ರಹ್ಮಕಲಶ ನಡೆಯಲಿದೆ.ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ವಿವಿಧ ಮಠದ ಮಠಾಧೀಶರು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದು ದಿನೇಶ್ ಭಂಡಾರಿ ವಿವರಿಸಿದರು.
ಭಗವಾನ್ ನಿತ್ಯಾನಂದರು ಧ್ಯಾನ,ತಪಸ್ಸಿಗಾಗಿ ಇದೇ ನಿತ್ಯಾನಂದನಗರಕ್ಕೆ ಬಂದಿದ್ದರೆಂಬ ಪ್ರತೀತಿ ಇದ್ದು,ಅವರ ಶಿಷ್ಯರಲ್ಲೊಬ್ಬರಾದ ಶ್ರೀ ಗೋವಿಂದ ಸ್ವಾಮಿಗಳು ತಮ್ಮ ಅದ್ಯಾತ್ಮಿಕ ಸಾಧನೆಗಾಗಿ ಬಂಟ್ವಾಳವನ್ನೇ ಕರ್ಮ ಭೂಮಿಯನ್ನಾಗಿ ಸಿದ್ದರು.ಅವರ ಪ್ರೇರಣೆಯಂತೆ 50 ವರ್ಷಗಳ ಹಿಂದೆ ಈ ಮಂದಿರ ನಿರ್ಮಾಣಗೊಂಡು ಪರಿಸರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ , ಸಾಮಾಜಿಕ, ಆಧ್ಯಾತ್ಮಿಕ ಬದುಕಿಗೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದೆ ಎಂದು ಹೇಳಿದ ಅವರು, ಶಿಥಿಲಾವಸ್ಥೆಯಲ್ಲಿದ್ದ ಮಂದಿರವನ್ನು ಭಕ್ತರ ಆಶಯದಂತೆ ಇದೀಗ ಪುನರ್ ನಿರ್ಮಿಸಲಾಗಿದೆ ಎಂದರು.
ಅಷ್ಟಭುಜ ಶ್ರಿ ಚಕ್ರ ಆಕೃತಿಯಲ್ಲಿ ನಿರ್ಮಿತವಾದ ಮಂದಿರದ ಸುತ್ತಲಿನ ಕಂಭಗಳಲ್ಲಿ 56 ದೇವರವಿಗ್ರಹಗಳು ನಿರ್ಮಾಣವಾಗಿದೆ.ಸುತ್ತಲು 16 ಕಿಟಕಿಗಳನ್ನು ಹೊಂದಿದೆ. ಸಾಧುಸಂತರ ಅಗಮನದಿಂದಾಗಿ ಭವಿಷ್ಯದಲ್ಲಿ ಧರ್ಮ-ಸಂಸ್ಕೃತಿಯ ಶಕ್ತಿಕೇಂದ್ರವಾಗಿ ಮೂಡಿಬರಲಿದೆ ಎಂದು ದಿನೇಶ್ ಭಂಡಾರಿ ತಿಳಿಸಿದರು.
27 ರಂದು ಸಾಮೂಹಿಕ ವಿವಾಹ:
ಮಂದಿರದ ಆಡಳಿತ ಸಮಿತಿ ವತಿಯಿಂದ ಜ.27 ರಂದು ಬೆ.10.46 ರ ಮೀನಲಗ್ನ ಸುಮುಹೂರ್ತದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು, 7 ಜತೆ ವಧು-ವರರು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.ನೂತನ ವಧುವರರನ್ನು ಎದುರುಗೊಳ್ಳುವ ಸಂಪ್ರದಾಯವು ಇದ್ದು,ಮುಂಬೈ ಗಣೇಶ್ ಪುರಿ ಶ್ರೀನಿತ್ಯಾನಂದ ಸ್ವಾಮಿ ಸಮಾಧಿ ಮಂದಿರದ ಪ್ರಧಾನ ಅರ್ಚಕ ನಂದುಮಹಾರಾಜ್ ನೂತನ ವಧುವರರಿಗೆ ಆಶೀರ್ವಚನ ನೀಡಲಿದ್ದಾರೆ ಎಂದು ಮಾಜಿ ಸಚಿವ,ಕಾಂಞಗಾಡ್ ಶ್ರೀ ನಿತ್ಯಾನಂದ ಆಶ್ರಮದ ಟ್ರಸ್ಟಿ ಬಿ.ನಾಗರಾಜ ಶೆಟ್ಟಿ ಈ ಸಂದರ್ಭದಲ್ಲಿ ಮಾಹಿತಿನೀಡಿದರು.
ಈ ಸಂದರ್ಭ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಮುಖಂಡರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ,ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸಹಿತ ಹಲವಾರು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ವಧವರರಿಗೆ ಮಂದಿರದ ಸಮಿತಿ ವತಿಯಿಂದ 10 ಸಾ.ರೂ.ಸಹಾಯಧನ, ವಧುವಿಗೆ ತಾಳಿ,ಹೂ ವಸ್ತ್ರ ಹಾಗೆಯೇ ವರನಿಗೆ ಧೋತಿ,ವಸ್ತ್ರ ನೀಡಲಾಗುತ್ತದೆ ಎಂದರು.
ಮಂದಿರದ ಪಕ್ಕದಲ್ಲೇ ಸಭಾಭವನವೊಂದನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು,ಸರಕಾರದಿಂದಲು ನೆರವನ್ನು ಕೋರಲಾಗಿದೆ.ಅನುದಾನ ಸಿಗುವ ಭರವಸೆ ಇದೆ.ನಿತ್ಯಾನಂದ ಸ್ವಾಮಿಗಳ ಆಶಯದಂತೆ ಭವಿಷ್ಯದಲ್ಲಿ ಬಾಲಬೋಜನ,ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸುವ ಯೋಚನೆಯು ಇದೆ. ಈ ಸಭಾಭವನದಲ್ಲಿ ಸಮಾಜಮುಖಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.ಜ.28 ಕ್ಕೆ ಚಂಡಿಕಾ ಹವನ,29 ರಂದು ಯಕ್ಷಗಾನ ಬಯಲಾಟ ನಡೆಯಲಿದೆ
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ, ಗೌರವಾಧ್ಯಕ್ಷ ಸುರೇಶ್ ಕುಲಾಲ್, ಕಾರ್ಯದರ್ಶಿ ಹರೀಶ್ ಎಂ.,ವಿವಿಧ ಸಮಿತಿ ಪದಾಧಿಕಾರಿಗಳಾದ ರಾಮದಾಸ್ ಬಂಟ್ವಾಳ, ಸೋಮಪ್ಪ ಪೂಜಾರಿ ಹೊಸ್ಮಾರು, ನಾಗೇಶ್ ಕುಲಾಲ್,ಪುರಸಭಾ ಸದಸ್ಯೆ ದೇವಕಿ ಮತ್ತಿತರರಿದ್ದರು.