ನಿಟ್ಟೆ ಡಾ. ಶಂಕರ್ ಅಡ್ಯಂತಾಯ ಸ್ಮಾರಕ ಪದವಿಪೂರ್ವ ಕಾಲೇಜು : ವಾರ್ಷಿಕ ಕ್ರೀಡಾಕೂಟ
ಕ್ರೀಡೆ ಮನುಷ್ಯನ ಸರ್ವತೋಮುಖ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಸ್ಪರ್ಧಾತ್ಮಕ ಮನೋಭಾವ, ನಾಯಕತ್ವದ ಗುಣ, ಹೊಂದಾಣಿಕೆ, ಒಂದು ತಂಡವಾಗಿ ದುಡಿಯುವುದು ಇವೇ ಮೊದಲಾದ ಗುಣಗಳನ್ನು ಬಾಲ್ಯದಲ್ಲೇ ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಬೆಳೆಸಬಲ್ಲದು. ಅಲ್ಲದೆ ಆರೋಗ್ಯದ ಸ್ಥಿರತೆ ಹಾಗೂ ಏಕಾಗ್ರತೆ ವೃದ್ಧಿಗೂ ಕ್ರೀಡೆ ಪರಿಣಾಮಕಾರಿಯಾಗಬಲ್ಲದು ಎಂದು ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆ ಸದಾ ಬೆಂಗಾವಲಾಗಿ ಪ್ರೋತ್ಸಾಹಿಸುತ್ತದೆ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಹರ್ಷ ಹಾಲಹಳ್ಳಿ ಹೇಳಿದರು.
ನಂತೂರಿನ ನಿಟ್ಟೆ ಡಾ. ಶಂಕರ ಅಡ್ಯಂತಾಯ ಸ್ಮಾರಕ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕ್ರೀಡಾ ಸಲಹೆಗಾರ ಡಾ. ಮುರಳಿ ಕೃಷ್ಣ ವಿ ಮಾತನಾಡಿ, ವಿದ್ಯಾರ್ಥಿಗಳು ದೇಶದ ಆಸ್ತಿ. ಸದೃಢ ಭಾರತ ಕಟ್ಟಲು ಆರೋಗ್ಯಕರ ಯುವಜನತೆ ಮುಖ್ಯ. ಅದು ಕ್ರೀಡೆಯಿಂದ ಸಾಧ್ಯ. ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಂತೂರಿನ ನಿಟ್ಟೆ ಡಾ. ಶಂಕರ್ ಅಡ್ಯಂತಾಯ ಸ್ಮಾರಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ನವೀನ್ ಶೆಟ್ಟಿ ಕೆ. ಮಾತನಾಡಿ, ಶಿಕ್ಷಣವೆಂದರೆ ಕೇವಲ ಪಠ್ಯಕ್ರಮವಲ್ಲ. ವಿದ್ಯಾರ್ಥಿಯ ಸರ್ವತೋಮುಖ ವಿಕಸನಕ್ಕೆ ಬೇಕಾದ ಎಲ್ಲವನ್ನು ನಮ್ಮ ಸಂಸ್ಥೆಯಲ್ಲಿ ನೀಡಲಾಗುತ್ತದೆ ಎಂದರು.
ಸಂಸ್ಥೆಯ ಹಳೆವಿದ್ಯಾರ್ಥಿ ಸಂಘದ ನಾಯಕ ಉದ್ಯಮಿ ವಿಜೇಶ್ ನಾಯಕ್, ಉಪಪ್ರಾಂಶುಪಾಲರಾದ ಅನ್ನಪೂರ್ಣ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಕುಮಾರಿ ಪ್ರಚೇತಾ ಆಚಾರ್ಯ ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ವಿದ್ಯಾದರ್ ಠಾಕೂರ್ ಸ್ವಾಗತಿಸಿದರು. ವಿದ್ಯಾರ್ಥಿ ಕ್ರೀಡಾ ಕಾರ್ಯದರ್ಶಿ ಕುಮಾರಿ ಶಮಿತಾ ವಂಧಿಸಿದರು. ಶ್ರೀಮತಿ ಮನಸ್ವಿ ನಿರ್ವಹಿಸಿದರು.