ಖಾಸಗಿತನಕ್ಕೆ ಧಕ್ಕೆ ತರಬೇಡಿ – ಹೋಟೆಲ್ ವಿರುದ್ಧ ಕೊಹ್ಲಿ ಕೆಂಡ
ಪರ್ತ್: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮ್ಯಾನ್ ವಿರಾಟ್ ಕೊಹ್ಲಿ (Virat Kohli) ಪರ್ತ್‍ನಲ್ಲಿ (Perth) ತಂಗಿದ್ದ ಹೋಟೆಲ್ ರೂಂಗೆ (Hotel Room) ನುಗ್ಗಿದ ಅಭಿಮಾನಿಯೋರ್ವ ಅಲ್ಲಿನ ವೀಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ವೈರಲ್ ಆಗುವಂತೆ ಮಾಡಿದ್ದಾನೆ.

ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಪಂದ್ಯಕ್ಕಾಗಿ ಭಾರತ ತಂಡ ಪರ್ತ್‍ಗೆ ಬಂದಿತ್ತು. ಪರ್ತ್‍ನಲ್ಲಿ ವಿರಾಟ್ ಕೊಹ್ಲಿ ತಂಗಿದ್ದ ಹೋಟೆಲ್ ರೂಂಗೆ ನುಗ್ಗಿದ್ದ ಅಪರಿಚಿತ ವ್ಯಕ್ತಿ ವೀಡಿಯೋ ಚಿತ್ರೀಕರಿಸಿ ಕೊಹ್ಲಿ ಬಳಸುವ ಎಲ್ಲಾ ವಸ್ತುಗಳು ಸೇರಿದಂತೆ ರೂಂನ ಎಲ್ಲಾ ಕೋಣೆಗಳನ್ನು ವೀಡಿಯೋ ಮಾಡಿ ಟಿಕ್‍ಟಾಕ್‍ನಲ್ಲಿ (TikTok) ಅಪ್ಲೋಡ್ ಮಾಡಿದ್ದ.

ಈ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕೊಹ್ಲಿ, ಅಭಿಮಾನಿಗಳು ತಮ್ಮ ಮೆಚ್ಚಿನ ಆಟಗಾರರನ್ನು ನೋಡಲು ಬಯಸುವುದು ಸಂತೋಷ. ಆದರೆ ಈ ರೀತಿ ಮಾಡುವುದು ಸರಿಯಲ್ಲ. ಹೋಟೆಲ್ ರೂಂನ ವೀಡಿಯೋ ಮಾಡಿ ಹರಿಬಿಟ್ಟಿರುವುದು ಬೇಸರ ತರಿಸಿದೆ. ಇದರಿಂದ ನಮ್ಮ ಖಾಸಗಿತನಕ್ಕೆ ಧಕ್ಕೆ ಆಗಿದೆ. ಈ ಘಟನೆಯಿಂದ ನನಗೆ ಆಘಾತವಾಗಿದೆ. ನಮ್ಮ ಖಾಸಗಿತನವನ್ನು ಗೌರವಿಸಿ ಇದರಿಂದ ನಮಗೆ ಸಮಸ್ಯೆಯನ್ನು ತಂದೊಡ್ಡಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.
ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಹೋಟೆಲ್ ಕ್ರೌನ್ ಟವರ್ ಕೊಹ್ಲಿ ಬಳಿ ಕ್ಷಮೆ ಕೇಳಿದೆ. ಈ ವೀಡಿಯೋ ಮಾಡಿದವರ ಕ್ರೌನ್ ಖಾತೆಯನ್ನು ರದ್ದು ಪಡಿಸಲಾಗುವುದು ಎಂದು ಹೇಳಿದೆ.