ಮಂಗಳೂರು ನಗರದಲ್ಲೇ ಸ್ಫೋಟಕ್ಕೆ ಪ್ಲಾನ್..! ಮಹತ್ವದ ಸುಳಿವು…! ಹಲವರ ಬಂಧನ…!
ಮಂಗಳೂರು: ನಗರದ ನಾಗುರಿಯಲ್ಲಿ ನಡೆದ ಆಟೋರಿಕ್ಷಾದಲ್ಲಿ ಸ್ಫೋಟ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಮಂಗಳೂರು ನಗರದಲ್ಲೇ ಸ್ಫೋಟಕ್ಕೆ ನಡೆದಿತ್ತ ಪ್ಲಾನ್..? ಎನ್ನುವ ಅನುಮಾನ ಮೂಡಿದೆ.

ಆಟೋದಲ್ಲಿ ಪತ್ತೆಯಾದ ಆಧಾರ್ ಕಾರ್ಡ್, ತುಮಕೂರಿನಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿಯ ಹೆಸರಲ್ಲಿದೆ!
ಹುಬ್ಬಳಿ ಮೂಲದ ಪ್ರೇಮರಾಜ್ ಹುಟಗಿ ಎಂಬುವವರು ತುಮಕೂರಿನಲ್ಲಿ ರೈಲ್ವೆ ಸಿಬ್ಬಂದಿ. ರೈಲ್ವೆ ಟ್ರ್ಯಾಕ್ ಮೈನ್ ಟೈನರ್ ಆಗಿ ಕೆಲಸ ಮಾಡ್ತಿರುವ ಪ್ರೇಮರಾಜ್ ಹುಟಗಿ, ಸದ್ಯ ತುಮಕೂರಿನ ಹಿರೇಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಕಳೆದ ಎರಡು ವರ್ಷದಲ್ಲಿ ಎರಡು ಬಾರಿ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು. ಒಮ್ಮೆ ಧಾರವಾಡದಿಂದ ಬೆಳಗಾವಿಗೆ ಬಸ್ನಲ್ಲಿ ಹೋಗುವಾಗ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು. ಬಳಿಕ ಮತ್ತೊಂದು ಆಧಾರ್ ಕಾರ್ಡ್ ಪಡೆದಿದ್ದರು. ಕಳೆದ ಆರು ತಿಂಗಳ ಹಿಂದೆ ಹುಬ್ಬಳ್ಳಿಯಿಂದ ಬಸ್ನಲ್ಲಿ ಬರುವಾಗ ಮತ್ತೊಮ್ಮೆ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು. ಇದೀಗ ಇವರ ಹೆಸರಲ್ಲಿದ್ದ ಆಧಾರ್ ಕಾರ್ಡ್ ಸ್ಫೋಟಗೊಂಡ ಆಟೋದಲ್ಲಿ ಸಿಕ್ಕಿದೆ!

ಮಂಗಳೂರಿನಲ್ಲಿ ಬಾಂಬ್ ಸ್ಫೋಟ ಮಾಡಿದ್ದ ವ್ಯಕ್ತಿ ನಕಲಿ ಆಧಾರ್ ವಿಳಾಸ ನೀಡಿದ್ದ ಬೆನ್ನಲ್ಲೇ ಆತ ಯಾರು.!!?? ಆತನ ಮೂಲ ಯಾವುದು ಎನ್ನುವುದರ ಬೆನ್ನು ಬಿದ್ದಿದ್ದ ಪೊಲೀಸರು ಕೊನೆಗೂ ಆತ ಯಾರು ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ತುಂಗಾ ನದಿಯ ತಟದಲ್ಲಿ ಬಾಂಬ್ ಸ್ಫೋಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ಸೆಪ್ಟೆಂಬರ್ 19 ರಂದು ಸಿದ್ದೇಶ್ವರ ನಗರ ನಿವಾಸಿಯಾದ ಸೈಯದ್ ಯಾಸಿನ್(21) ಮತ್ತು ಮಂಗಳೂರಿನ ಮಾಜ್ ಮುನೀರ್‌ನನ್ನು(22) ಬಂಧಿಸಿದ್ದರು. ಆದರೆ ಈ ಪ್ರಕರಣದ ಪ್ರಮುಖ ಎ1 ಆರೋಪಿಯಾಗಿದ್ದ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ಮೂಲದ ಶಾರೀಕ್ ನಾಪತ್ತೆಯಾಗಿದ್ದ. ನಾಪತ್ತೆಯಾಗಿದ್ದ ಈತನ ಬಂಧನಕ್ಕೆ ಪೊಲೀಸರು ಸಾಕಷ್ಟು ಬಲೆ ಬೀಸಿದ್ದರೂ ಸಿಕ್ಕಿ ಬಿದ್ದಿರಲಿಲ್ಲ. ಆದರೆ ಈಗ ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಮಾಡಿ ಸಿಕ್ಕಿಬಿದ್ದಿದ್ದಾನೆ.

ಆಟೋರಿಕ್ಷಾದಲ್ಲಿದ್ದ ಕುಕ್ಕರ್ ಅನ್ನು ಜನನಿಬಿಡ ಜಾಗದಲ್ಲಿ ಸ್ಫೋಟಿಸಲು ಕೊಂಡೊಯ್ಯಲಾಗುತ್ತಿತ್ತು, ಅದಕ್ಕೆ ಡೀಟೋನೇಟರ್, ಸುಧಾರಿತ ಸ್ಪೋಟಕ, ಬ್ಯಾಟರಿ ಅಳವಡಿಸಲಾಗಿತ್ತು ಎಂಬ ಅಂಶವೂ ಬೆಳಕಿಗೆ ಬಂದಿದೆ. ಈ ಮಧ್ಯೆ ಕಳೆದ ತಿಂಗಳು ಕೊಯಮತ್ತೂರಿನಲ್ಲಿ ನಡೆದಿದ್ದ ಕಾರು ಸ್ಪೋಟ ಪ್ರಕರಣಕ್ಕೂ ಶನಿವಾರದ ಘಟನೆಗೂ ಸಂಬಂಧವಿದೆ ಎಂದು ಹೇಳಿರುವ ಕಮಿಷನರ್ ಪ್ರಕರಣದ ತನಿಖೆಗೆ 10 ತಂಡಗಳನ್ನು ರಚಿಸುವುದಾಗಿ ತಿಳಿಸಿದ್ದಾರೆ.