ಬಿಎಂಟಿಸಿ ಶೀಘ್ರ ಆಗಲಿದೆ ಕಂಡಕ್ಟರ್ ಲೆಸ್ – ಡಿಜಿಟಲ್ ತಂತ್ರಜ್ಞಾನದಿಂದ ಟಿಕೆಟ್ ಕಲೆಕ್ಷನ್
ಬೆಂಗಳೂರು: ಬಿಎಂಟಿಸಿ (BMTC) ಸದ್ಯ ಮುಳುಗೋ ಹಡಗು. ಇರುವ ನೌಕರರಿಗೆ ಸಂಬಳ ಕೊಡಲಾಗದೇ ನಿಗಮ ಹೆಣಗಾಡುತ್ತಿದೆ. ಹೀಗಿರುವಾಗ ನಷ್ಟದ ಸುಳಿಯಿಂದ ಬಿಎಂಟಿಸಿಯನ್ನು ಮೇಲೆತ್ತಲು ಮಾಸ್ಟರ್ ಪ್ಲಾನ್ ರೆಡಿಯಾಗಿದೆ. ಹೊಸ ಪ್ಲಾನ್ ಪ್ರಕಾರ ಬಸ್ ಓಡಿದರೆ, ಡ್ರೈವರ್ ಇರುತ್ತಾರೆ. ಆದರೆ ನಿರ್ವಾಹಕ ಮಾತ್ರ ಇರುವುದಿಲ್ಲ. ಏನಿದು ಹೊಸ ಪ್ಲಾನ್? ನಿರ್ವಾಹಕ ಇಲ್ಲದೇ ಟಿಕೆಟ್ ಕಲೆಕ್ಷನ್ ಹೇಗೆ? ಈ ಎಲ್ಲದರ ಕುರಿತಂತೆ ಮಾಹಿತಿ ಈ ಕೆಳಗಿನಂತಿದೆ.
ಹೌದು, ಬಿಎಂಟಿಸಿ ಬಸ್ ಹತ್ತುತ್ತಿದ್ದಂತೆ ನಿಮ್ಮನ್ನ ಸ್ವಾಗತಿಸುವುದೇ ನಿರ್ವಾಹಕ. ಆದರೆ ಇನ್ಮುಂದೆ ಬಿಎಂಟಿಸಿಯಲ್ಲಿ ಈ ನಿರ್ವಾಹಕರು ಕಾಣುವುದು ಡೌಟ್. ನಿರ್ವಾಹಕರಿಲ್ಲದೇ ಟಿಕೆಟ್ ಕಲೆಕ್ಷನ್ ಟಿಕೆಟ್ ಕಲೆಕ್ಷನ್ ಹೇಗೆ ಮಾಡುವುದು ಎಂಬುವುದರ ಬಗ್ಗೆ ಬಿಎಂಟಿಸಿ ಪ್ಲಾನ್ ಮಾಡಿಕೊಂಡಿದೆ. ಸದ್ಯ ನಿಗಮ ಆರ್ಥಿಕ ಹೊರೆ ಎದುರಿಸುತ್ತಿದೆ. ಜೊತೆಗೆ ಡ್ರೈವರ್ ಕೊರತೆಯೂ ಕಾಡುತ್ತಿದೆ. ಹೊಸ ನೇಮಕಾತಿಗೂ ಸರ್ಕಾರ ಒಪ್ಪಿಗೆ ಸೂಚಿಸುತ್ತಿಲ್ಲ. ಹೀಗಾಗಿ ನಿರ್ವಾಹಕ ಪೋಸ್ಟ್‌ಗಳನ್ನೇ ಎತ್ತಂಗಡಿ ಮಾಡಲು ನಿಗಮ ಪ್ಲಾನ್ ಮಾಡಿದೆ.
ಬಿಎಂಟಿಸಿಯಲ್ಲಿ ಡಿಜಿಟಲ್ ತಂತ್ರಜ್ಞಾನ (Digital Technology) ಅಳವಡಿಸುವ ಪ್ರಯತ್ನವನ್ನು ಆರಂಭಿಸಲಾಗಿದೆ. ಕಾಮನ್ ಮೊಬಿಲಿಟಿ ಕಾರ್ಡ್, ಇ ಪಾಸ್, ಸೇರಿ ಹಲವು ಡಿಜಿಟಲ್ ಸೌಲಭ್ಯವನ್ನು ಜಾರಿಗೆ ತಂದು ಟಿಕೆಟ್ ಕಲೆಕ್ಷನನ್ನು ಸಂಪೂರ್ಣ ಡಿಜಿಟಲೈಸ್ ಮಾಡಲು ಬಿಎಂಟಿಸಿ ತೀರ್ಮಾನಿಸಿದೆ. ಈ ಮೂಲಕ ನಿಗಮದಲ್ಲಿರುವ ಎಲ್ಲಾ ನಿರ್ವಾಹಕರನ್ನು ಕೆಲಸದಿಂದ ಮುಕ್ತರಾಗಲಿದ್ದಾರೆ. ಸದ್ಯ ಇರುವ ಪ್ರತಿಯೊಬ್ಬ ನಿರ್ವಾಹಕರು ಕಂಡಕ್ಟರ್ ಕಂ ಡ್ರೈವರ್ ಆದವರೇ. ಹೀಗಾಗಿ ಈ ಎಲ್ಲಾ ನಿರ್ವಾಹಕರನ್ನು ಡ್ರೈವಿಂಗ್‍ಗೆ ನಿಯೋಜಿಸಲು ಬಿಎಂಟಿಸಿ ತೀರ್ಮಾನಿಸಿದೆ. ಈ ಮೂಲಕ ಹೊಸ ನೇಮಕಾತಿ ಇಲ್ಲದೇ ಹೆಚ್ಚುವರಿ ಬಸ್‍ಗಳನ್ನು ರಸ್ತೆಗಿಳಿಸಲು ಬಿಎಂಟಿಸಿ ಪ್ಲಾನ್ ಮಾಡಿದೆ. ಆದರೆ ಇದಕ್ಕೆ ಕಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ.
ಇದು ಕಾರ್ಮಿಕರ ಹೊಟ್ಟೆ ಮೇಲೆ ಹೊಡೆಯುವ ಹುನ್ನಾರ. ಮುಂದೆ ಬಿಎಂಟಿಸಿಯನ್ನು ಖಾಸಗೀಕರಣ ಮಾಡುವ ನಿಟ್ಟಿನ ಕೊನೆಯ ಮಳೆಯಾಗಿದೆ. ಬಿಎಂಟಿಸಿ ಸಂಸ್ಥೆಯ ನೌಕರರು ಬೀದಿಗೆ ಬರುತ್ತಾರೆ. ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು ಎಂದು ಕಾರ್ಮಿಕ ಮುಖಂಡ ಆನಂದ್ ಆಗ್ರಹಿಸಿದ್ದಾರೆ.