ಗುಜರಾತ್‍ನ ತೂಗು ಸೇತುವೆ ಕುಸಿತ ವಿಚಾರದಲ್ಲಿ ರಾಜಕೀಯ ಮಾಡಲ್ಲ: ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಗುಜರಾತ್ (Gujarat) ಮೋರ್ಬಿ ಸೇತುವೆ (Morbi Bridge) ಕುಸಿತದಿಂದ ಅನೇಕ ಮಂದಿ ಪ್ರಾಣಕಳೆದುಕೊಂಡಿರುವ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಬೇಸರ ವ್ಯಕ್ತಪಡಿಸಿದ್ದು, ಸೇತುವೆ ಕುಸಿತಕ್ಕೆ ಕಾರಣವೇನೆಂಬುವುದರ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಘಟನೆಯಲ್ಲಿ ಮೃತಪಟ್ಟಿದವರಿಗೆ ಸಂತಾಪ ಸೂಚಿಸುತ್ತೇನೆ. ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿ ಸೇತುವೆ ಯಾಕೆ ಕುಸಿದಿದೆ. ಅಲ್ಲಿ ಇಷ್ಟು ಜನರು ಓಡಾಡಲು ಅವಕಾಶ ನೀಡಿದವರು ಯಾರು? ಈ ಎಲ್ಲದರ ಬಗ್ಗೆ ಸುಪ್ರೀಂಕೋರ್ಟ್ (Supreme Court) ಅಥವಾ ಹೈಕೋರ್ಟ್ (High Court) ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಯಬೇಕು. ಮೃತರ ಕುಟುಂಬಕ್ಕೆ ಪರಿಹಾರ ಸೇರಿದಂತೆ ಎಲ್ಲ ಅಗತ್ಯ ನೆರವು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ತಮ್ಮ ಪಕ್ಷದ ಕಾಂಗ್ರೆಸ್ ನಾಯಕರು ಕೂಡ ಮೋರ್ಬಿಗೆ ಭೇಟಿ ನೀಡಿ, ಸಂತ್ರಸ್ತ ಕುಟುಂಬಸ್ಥರಿಗೆ ಸಹಾಯ ಮಾಡಲಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಹ ಘಟನಾ ಸ್ಥಳಕ್ಕೆ ಹೋಗಲಿದ್ದಾರೆ. ನಾವು ಕೂಡ ಸಹಾಯ ಮಾಡಲು ಪ್ರಯತ್ನಿಸುತ್ತೇವೆ. ಈ ವಿಚಾರದಲ್ಲಿ ನಾವು ಯಾವುದೇ ರಾಜಕೀಯ ಮಾಡಲು ಬಯಸುವುದಿಲ್ಲ ಮತ್ತು ಈಗಲೇ ಯಾರನ್ನೂ ದೂಷಿಸಲು ಬಯಸುವುದಿಲ್ಲ. ತನಿಖಾ ವರದಿ ಬಂದ ನಂತರ ಏನು ಮಾಡುತ್ತಾರೆ ಅಂತ ನೋಡುತ್ತೇವೆ ಎಂದು ಹೇಳಿದ್ದಾರೆ.