ಸುರತ್ಕಲ್ ವೃತ್ತಕ್ಕೆ ವೀರ ಸಾವರ್ಕರ್ ಹೆಸರಿಡುವ ವಿಚಾರ ಆಡಳಿತ ಮತ್ತು ವಿಪಕ್ಷಗಳ ನಡುವೆ ಮಾತಿನ ಚಕಮಕಿ
ಮಂಗಳೂರು: ಸುರತ್ಕಲ್ ಪೇಟೆಯಲ್ಲಿರುವ ವೃತ್ತಕ್ಕೆ ವೀರ ಸಾವರ್ಕರ್ ಹೆಸರು ಇರಿಸುವ ಪ್ರಸ್ತಾಪ ಮತ್ತೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.
ಈ ಸಂದರ್ಭ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ನಡಾವಳಿಯಲ್ಲಿ ಭಾಗವಹಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಸದಸ್ಯರು ಧಿಕ್ಕಾರ ಕೂಗಿದರೆ, ಬಿಜೆಪಿ ಸದಸ್ಯರು ಜೈಕಾರ ಮೊಳಗಿಸಿದರು. ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಜೆಪಿಗರು ಹೇಳುವ ಸಾವರ್ಕರ್ ಅವರ ಹೆಸರು ವಿವಾದಿತವಾಗಿದ್ದು, ಇಂತಹ ಸಂದರ್ಭದಲ್ಲಿ ಈ ಹೆಸರನ್ನು ಇರಿಸಲು ಅನುಮತಿ ನೀಡಬಾರದು. ಕೂಡಲೇ ಹೆಸರು ಇರಿಸುವ ಪ್ರಸ್ತಾಪವನ್ನು ಕೈಬಿಡಬೇಕೆಂದು ಕಾಂಗ್ರೆಸ್ ಸದಸ್ಯರು ವಾದಿಸಿದರು. ಕಳೆದ ಬಾರಿಯ ಪಾಲಿಕೆ ಸಭೆಯಲ್ಲಿ ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ವೃತ್ತ ಎಂದು ನಾಮಕರಣ ಮಾಡಿ ಅಜೆಂಡಾ ಅಂಗೀಕಾರ ಮಾಡಲಾಗಿತ್ತು. ಆದರೆ ಇದು ಕಾಂಗ್ರೆಸ್ ಸದಸ್ಯರ ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ.
ಈ ವಿಚಾರ ಹಿಂದಿನ ಸಭೆಯಲ್ಲಿ ಅನುಮೋದನೆಗೊಂಡಿದೆ. ಆ ಸಂದರ್ಭದಲ್ಲಿ ಮಾತನಾಡದಿರುವ ಕಾಂಗ್ರೆಸ್ ಸದಸ್ಯರು ಈಗ ವಿರೋಧ ವ್ಯಕ್ತಪಡಿಸುವುದರಲ್ಲಿ ಅರ್ಥ ಇಲ್ಲ, ಹೀಗಾಗಿ ಹೆಸರು ಇರಿಸುವ ವಿಚಾರಕ್ಕೆ ಅಂತಿಮ ನಿರ್ಣಯ ಕೈಗೊಳ್ಳಬಹುದು ಎಂದು ಬಿಜೆಪಿ ಸದಸ್ಯರು ಹಠ ಹಿಡಿದರು. ಆದರೆ ಕಾಂಗ್ರೆಸಿಗರು ಪಟ್ಟು ಬಿಡದೇ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.