Published On: Wed, Oct 19th, 2022

KSRTC ಸಿಬ್ಬಂದಿಗೆ ಗುಡ್‌ ನ್ಯೂಸ್‌ – 50 ಲಕ್ಷ ರೂ. ಅಪಘಾತ ವಿಮಾ ಯೋಜನೆ ಜಾರಿ ಮಾಡಿದ ನಿಗಮ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗೆ ಕೆಎಸ್‌ಆರ್‌ಟಿಸಿ (KSRTC) ಸಂಸ್ಥೆ ಗುಡ್‌ ನ್ಯೂಸ್‌ ನೀಡಿದೆ. ಇದೇ ಮೊದಲ ಬಾರಿಗೆ 50 ಲಕ್ಷ ರೂ. ಅಪಘಾತ ವಿಮಾ ಯೋಜನೆ ಸೌಲಭ್ಯವನ್ನು ಸಿಬ್ಬಂದಿಗಾಗಿ ನಿಗಮ ಜಾರಿಗೊಳಿಸಿದೆ.

ಇದುವರೆಗೂ ನಿಗಮದ ಸಿಬ್ಬಂದಿ ಅಪಘಾತದಲ್ಲಿ (ಕರ್ತವ್ಯದ ಮೇಲೆ ಅಥವಾ ಕರ್ತವ್ಯದಲ್ಲಿ ಇಲ್ಲದಿರುವಾಗಲೂ) ಮೃತಪಟ್ಟರೆ, ಶಾಶ್ವತ ಅಥವಾ ಭಾಗಶಃ ಅಂಗವೈಕಲ್ಯಕ್ಕೆ ತುತ್ತಾದರೆ ಯಾವುದೇ ದೊಡ್ಡ ಮೊತ್ತದ ಪರಿಹಾರದ ಹಣ ಅವರ ಅವಲಂಬಿತರಿಗಾಗಲಿ ಅಥವಾ ಅವರಿಗಾಗಲಿ ಲಭಿಸುತ್ತಿರಲಿಲ್ಲ. 

ಸಿಬ್ಬಂದಿ ಸಂಸ್ಥೆಗಾಗಿ ಹಗಲಿರುಳು ದುಡಿಯುತ್ತಾರೆ ಅವರ ಆಕಸ್ಮಿಕ ಅಗಲಿಕೆಯು ಅಥವಾ ಅಂಗವೈಕಲ್ಯತೆಯು ಅವರ ಪರಿವಾರದವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಬಾರದೆಂಬ ಕಾರಣದಿಂದ ಅವರ ಅವಲಂಬಿತರ ಹಿತ ಕಾಪಾಡುವ ಈ ಅಪಘಾತ ವಿಮಾ ಪ್ಯಾಕೇಜ್ ಯೋಜನೆಯ ಒಡಂಬಡಿಕೆಯನ್ನು ಇಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅವರೊಂದಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ಶಾಸಕರು ಹಾಗೂ ಅಧ್ಯಕ್ಷ ಎಂ.ಚಂದ್ರಪ್ಪ ಅವರ ಸಮ್ಮುಖದಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಹಾಗೂ ಎಸ್‌ಬಿಐನ ಡಿಜಿಎಂ ಪಂಕಜ್ ತಪ್ಲಿಯಾಲ್ ಸಹಿ ಹಾಕಿದರು.

ಈ ಸಿಬ್ಬಂದಿ ವೇತನ ಪ್ಯಾಕೇಜ್ ಅಪಘಾತ ವಿಮಾ ಯೋಜನೆಯು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ತಮ್ಮ ವೇತನ ಖಾತೆಯನ್ನು ಹೊಂದಿರುವ ನಿಗಮದ ನೌಕರರಿಗೆ ʼಪ್ರೀಮಿಯಂ ರಹಿತʼ ವೈಯುಕ್ತಿಕ ಅಪಘಾತ ವಿಮೆಯನ್ನು ಒಳಗೊಂಡಿದೆ (ಈಗಾಗಲೇ ನಿಗಮದ ಶೇ.55ರಷ್ಷು ಸಿಬ್ಬಂದಿ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಖಾತೆಗಳನ್ನು ಹೊಂದಿರುತ್ತಾರೆ). ಈ ವೈಯುಕ್ತಿಕ ವಿಮಾ ಯೋಜನೆಯಿಂದ ಪಾಲಿಸಿದಾರರು ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ 50 ಲಕ್ಷ ರೂ. ಪರಿಹಾರದ ಹಣ ಕೂಡಲೇ ದೊರೆಯಲಿದೆ. 

ಅಪಘಾತದಲ್ಲಿ ಸಿಬ್ಬಂದಿ ಶಾಶ್ವತವಾಗಿ ಪೂರ್ಣ ಅಂಗವೈಕಲ್ಯಕ್ಕೆ ತುತ್ತಾದಲ್ಲಿ 20 ಲಕ್ಷ ರೂ. ಹ಼ಣ ಹಾಗೂ ಭಾಗಶಃ ಅಂಗವೈಕಲ್ಯ ಉಂಟಾದಲ್ಲಿ 10 ಲಕ್ಷ ರೂ. ವಿಮಾ ಪರಿಹಾರ ದೊರೆಯಲಿದೆ. ಈ ವಿಮಾ ಯೋಜನೆಯಲ್ಲಿ ಮತ್ತೊಂದು ಉಪಯಕ್ತ ಕ್ರಮವೆಂದರೆ ಕರ್ತವ್ಯನಿರತ ಹಾಗೂ ಕರ್ತವ್ಯದಲ್ಲಿ ಇಲ್ಲದ (On duty and Off duty) ಸಮಯದಲ್ಲೂ ಆಗುವ ವೈಯಕ್ತಿಕ ಅಪಘಾತಗಳಿಗೂ ವಿಮೆ ಅನ್ವಯಿಸುತ್ತದೆ.

ಸಿಬ್ಬಂದಿ ಅಪಘಾತದಲ್ಲಿನ ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಗಾಗಿ ಗರಿಷ್ಟ 10 ಲಕ್ಷ ರೂ., ಔಷಧಗಳ ಆಮದಿಗಾಗಿ ಗರಿಷ್ಟ 5 ಲಕ್ಷ ರೂ., ಕೋಮಾದಲ್ಲಿ ಮೃತಪಟ್ಟರೆ ಹೆಚ್ಚುವರಿ 2 ಲಕ್ಷ ರೂ. (50 ಲಕ್ಷ ರೂ. + 2 ಲಕ್ಷ ರೂ.), ಏರ್ ಅಂಬುಲೆನ್ಸ್ ಸೇವೆಗೆ 10 ಲಕ್ಷ ರೂ. ವಿಮಾ ಪರಿಹಾರ ನೀಡಲಾಗುವುದು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter