ಅಡಕೆ ಆಮದು ವಿಚಾರದಲ್ಲಿ ಸರ್ಕಾರ ವಿಮರ್ಶೆ ಮಾಡಬೇಕಾದ ಅಗತ್ಯವಿದೆ
ಪುತ್ತೂರು: ನಮ್ಮ ದೇಶದಲ್ಲಿ ಸುಮಾರು 18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ದೇಶಕ್ಕೆ ಬೇಕಾಗುವಷ್ಟು ಅಡಕೆ ಬೆಳೆಯಲಾಗುತ್ತಿದ್ದರೂ ಇದೀಗ ಭೂತಾನ್‍ನಿಂದ ಅಡಕೆ ಆಮದು ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ದೇಶದ ಅಡಕೆ ಬೆಳೆಗಾರರ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಕೇಂದ್ರ ಸರಕಾರ ವಿಮರ್ಶೆ ಮಾಡಬೇಕಾದ ಅಗತ್ಯವಿದೆ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಸರಕಾರವನ್ನು ಆಗ್ರಹಿಸಿದ್ದಾರೆ.

ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಅಡಕೆ ಬೆಳೆಯನ್ನೇ ನೆಚ್ಚಿಕೊಂಡಿರುವ ದ.ಕ.ಜಿಲ್ಲೆಯಲ್ಲಿ ರಬ್ಬರ್, ತೆಂಗು, ಕೊಕ್ಕೊ, ಬಾಳೆ ಮುಂತಾದ ಉಪಬೆಳೆಯನ್ನೂ ಮಾಡಲಾಗುತ್ತಿದೆ. ಪ್ರಸ್ತುತ ಅಡಕೆ ದರ ಹಿಂದೆಗಿಂತಲೂ ಎರಡು ಪಟ್ಟು ಜಾಸ್ತಿಯಾಗಿದ್ದರೂ, ರಾಸಾಯನಿಕ ಗೊಬ್ಬರ, ಕೂಲಿ ದರದಲ್ಲಿ ಮೂರ್ನಾಲ್ಕು ಪಟ್ಟು ಜಾಸ್ತಿಯಾಗಿದೆ.
ಪರಿಣಾಮ ಅಡಕೆ ದರದಲ್ಲಿ ಏರಿಕೆಯಾದರೂ ಜಿಲ್ಲೆಯ ಆರ್ಥಿಕ ಸುಧಾರಣೆ, ಅಡಕೆ ರೈತರಿಗೆ ಪ್ರಯೋಜನವಿಲ್ಲದಂತಾಗಿದೆ. ಈ ನಡುವೆ ಅಡಕೆ ಆಮದಿನಿಂದಾಗಿ ರೈತರು ಆತಂಕದ ಪರಿಸ್ಥಿತಿಯಲ್ಲಿದ್ದಾರೆ. ಇಷ್ಟೆಲ್ಲಾ ಆದರೂ ರಾಜ್ಯ ಮುಖ್ಯಮಂತ್ರಿಗಳು, ಜಿಲ್ಲೆಯ ಸಂಸದರು, ಶಾಸಕರು ಈ ವಿಚಾರದಲ್ಲಿ ಚಕಾರವೆತ್ತುತ್ತಿಲ್ಲ. ಈ ವಿಚಾರದಲ್ಲಿ ಅವರ ನಿಲುವು ಏನು ಎಂಬುದು ಗೊತ್ತಾಗುತ್ತಿಲ್ಲ. ಇದನ್ನು ಜನಸಾಮಾನ್ಯರು ಪ್ರಶ್ನಿಸಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ಬ್ಲಾಕ್ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಉಪಸ್ಥಿತರಿದ್ದರು.