ಬೆಂಗಳೂರಿನಲ್ಲಿ ಬಿಲ್ಡಿಂಗ್ ಕುಸಿದು ಇಬ್ಬರ ಸಾವು
ಬೆಂಗಳೂರು: ಭಾರೀ ಮಳೆಗೆ ಬಿಲ್ಡಿಂಗ್ ಕುಸಿದು ಇಬ್ಬರು ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯವಾದ ಘಟನೆ ಬೆಂಗಳೂರಿನ ವೈಟ್‌ಫಿಲ್ಡ್ ಬಳಿಯ ಹೂಡಿಯಲ್ಲಿ ನಡೆದಿದೆ.
ಮೃತರನ್ನು ಬಿಹಾರ ಮೂಲದ ಜೈನುದ್ದೀನ್, ಹರಮಾನ್ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಮಳೆ ಬಂದ ಹಿನ್ನೆಲೆಯಲ್ಲಿ ಬಿಎಲ್‍ಆರ್ ಕಂಪನಿಗೆ ಸೇರಿದ ಕಟ್ಟಡದ ಕೆಳಗಿರುವ ರೂಮ್‍ನಲ್ಲಿ ಕಾರ್ಮಿಕರು ಮಲಗಿದ್ದರು. ಆದರೆ ಬಿಎಲ್‍ಆರ್ ಕಂಪನಿಗೆ ಸೇರಿದ ಹಳೆಯ ಕಟ್ಟಡ ಇದಾಗಿದ್ದು, ಇದನ್ನು ತೆರವು ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರಾತ್ರಿ ಸುರಿದ ಭಾರೀ ಮಳೆಗೆ ಸಂಪೂರ್ಣ ಬಿಲ್ಡಿಂಗ್ ಕುಸಿದಿದ್ದು, ಈ ವೇಳೆ ಕೆಳಗೆ ರೂಮ್‍ನಲ್ಲಿ ಮಲಗಿದ್ದ ಇಬ್ಬರು ಮೃತಪಟ್ಟಿದ್ದಾರೆ.
ಘಟನೆ ಸಂಬಂಧಿಸಿ ಮಹಾದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆ ಕುರಿತು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಗಂಭೀರವಾಗಿ ಗಾಯಗೊಂಡಿದ್ದ ಮೂವರನ್ನು ರಕ್ಷಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.