ಭಾರತ ಎಂದಿಗೂ ಹಿಂದೂರಾಷ್ಟ್ರ – ಮುಸ್ಲಿಂ ರಾಷ್ಟ್ರವಾಗಿಸಲು ಸಾಧ್ಯವಿಲ್ಲ: ಸುನಿಲ್ ಕುಮಾರ್
ಉಡುಪಿ: ಭಾರತ ಎಂದಿಗೂ ಹಿಂದೂರಾಷ್ಟ್ರವೇ (Hindu Nation) ಹೊರತು ಮುಸ್ಲಿಂ ರಾಷ್ಟ್ರವಾಗಿಸಲು ಸಾಧ್ಯವಿಲ್ಲ ಎಂದು ಸಚಿವ ವಿ. ಸುನಿಲ್ ಕುಮಾರ್ (V SunilKumar) ಹೇಳಿದ್ದಾರೆ.
ದೇಶಾದ್ಯಂತ ನಡೆದ ಎನ್‌ಐಎ (NIA) ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತವನ್ನು (India) ಮುಸ್ಲಿಂ ರಾಷ್ಟ್ರವಾಗಿಸಲು ಸಾಧ್ಯವಿಲ್ಲ. ಭಾರತ ಎಂದಿಗೂ ಹಿಂದೂರಾಷ್ಟ್ರ, ಹಿಂದೂ ಸಂಸ್ಕೃತಿಯ (Hindu Culture) ಆಧಾರದಲ್ಲೇ ರಾಷ್ಟ್ರವನ್ನು ಮತ್ತಷ್ಟು ಬಲಗೊಳಿಸುತ್ತೇವೆ. ಜನರು ಕೂಡ ಇದಕ್ಕೆ ಬೆಂಬಲ ಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಪಿಎಫ್‌ಐ (PFI) ಅನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (Karnataka Government) ಬಗ್ಗು ಬಡಿಯುತ್ತವೆ. ಭಾರತವನ್ನು ದುರ್ಬಲಗೊಳಿಸುವ ಪ್ರಯತ್ನ ಯಾರೂ ಮಾಡಬಾರದು. ಬಂಧಿತ ವ್ಯಕ್ತಿಗಳು ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ಕನಸು ಕಂಡಿದ್ದರು. ಜಗತ್ತಿನ ಯಾವುದೇ ರಾಷ್ಟ್ರಗಳು ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.
ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆಯಾದಾಗ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಾಗಿ ಹೇಳಿದ್ದೆವು. ಕಾರ್ಯಕರ್ತರಿಗೆ ನ್ಯಾಯ ಕೊಡುವ ಭರವಸೆಯನ್ನೂ ನೀಡಿದ್ದೆವು. ಪ್ರಕರಣವನ್ನು ಎನ್‌ಐಎಗೆ ಕೊಟ್ಟು ಸರ್ಕಾರ ಕೈಕಟ್ಟಿ ಕುಳಿತಿಲ್ಲ, ತನ್ನ ಜವಾಬ್ದಾರಿಯನ್ನ ನಿರ್ವಹಿಸುತ್ತಿದೆ ಎಂದು ಬೀಗಿದ್ದಾರೆ.
ಸಿದ್ದು ಕಾಲದಲ್ಲಿ ಹಿಂದೂಗಳ ಹತ್ಯೆಯಾಗಿತ್ತು:
ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಕಾಲದಲ್ಲಿ ಎಸ್‌ಡಿಪಿಐ (SDPI), ಪಿಎಫ್‌ಐ (PFI) ಸಂಘಟನೆಗಳನ್ನು ಪೋಷಿಸಿದ್ದರು. ಅವರ ಕಾಲದಲ್ಲೇ 18 ಹಿಂದೂಗಳ ಹತ್ಯೆಯಾಗಿತ್ತು. ಆರೋಪಿಗಳ ಕೇಸನ್ನು ಸಿದ್ದರಾಮಯ್ಯ ಸರ್ಕಾರ ವಾಪಸ್ ಪಡೆದಿತ್ತು. ಅಶಾಂತಿ ಸೃಷ್ಟಿಸಿರುವವರ ವಿರುದ್ಧ ಕಾಂಗ್ರೆಸ್ ಸ್ನೇಹ ಬೆಳೆಸಿತ್ತು ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್‌ನಿಂದ ಪೇ ಸಿಎಂ (PayCM) ಅಭಿಯಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದೆ. ಪೇ ಸಿಎಂ ಎಂಬುದು ಕಾಂಗ್ರೆಸ್‌ನ ಸುಳ್ಳಿನ ಸುರಿಮಳೆ. ಅರ್ಕಾವತಿ ಇಂದಿರಾ ಕ್ಯಾಂಟೀನ್ ಹಾಸಿಗೆಯಲ್ಲಿ ಹಣ ನುಂಗಿದವರು ಕಾಂಗ್ರೆಸ್ಸಿಗರೇ ಅಲ್ಲವೇ? ಈಗ ಪೇ ಸಿಎಂ ಪೋಸ್ಟರ್ ಅಂಟಿಸಲು ಯಾವ ನೈತಿಕತೆ ಇದೆ? ಪೋಸ್ಟರ್ ಅಂಟಿಸಿದ ಡಿಕೆಶಿ (DK Shivakumar), ಇಡಿ (ED) ಕಚೇರಿಗೆ ಹೋಗಿದ್ದು ಯಾಕೆ? ಈ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಭ್ರಷ್ಟಾಚಾರವನ್ನು ಉತ್ತುಂಗಕ್ಕೆ ಏರಿಸಿದ ಕಾಂಗ್ರೆಸ್ಸಿಗರು ನಮ್ಮ ಕಾಮನ್ ಸಿಎಂ ಬಗ್ಗೆ ಮಾತನಾಡುತ್ತಾರೆ. ಭ್ರಷ್ಟಾಚಾರ ನಡೆದಿದ್ದರೆ ಮುಖ್ಯಮಂತ್ರಿಗಳ ವಿರುದ್ಧ ನ್ಯಾಯಾಲಯ, ಲೋಕಾಯುಕ್ತಕ್ಕೆ ದೂರು ಕೊಡಲಿ. 10 ದಿನದ ಅಧಿವೇಶನದಲ್ಲಿ ಭ್ರಷ್ಟಾಚಾರದ ಬಗ್ಗೆ ಒಂದು ದಿನವೂ ಚರ್ಚೆ ನಡೆದಿಲ್ಲ. ನೀವು ಭ್ರಷ್ಟಾಚಾರದ ಆರೋಪ ಮಾಡಿಕೊಂಡಿರಿ, ನಾವು ನಮ್ಮ ಕಾರ್ಯಕ್ರಮ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ ಎಂದು ಕಾಂಗ್ರೆಸ್‌ನ ಭ್ರಷ್ಟಾಚಾರದ ಆರೋಪವನ್ನು ತಳ್ಳಿಹಾಕಿದ್ದಾರೆ.