ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ 3 ದಿನಗಳ ಕಾಲ ನಡೆಯುವ 11ನೇ ಆಳ್ವಾಸ್ ನುಡಿಸಿರಿಗೆ ವಿದ್ಯಾಗಿರಿಯಲ್ಲಿ ವರ್ಣರಂಜಿತ ಚಾಲನೆ ನೀಡಲಾಯಿತು.
ನಾಡಿನ ಹಿರಿಯ ಸಾಹಿತಿ ಡಾ.ನಾ.ಡಿ’ಸೋಜ ನಾಡು ನುಡಿಯ ಸಮ್ಮೇಳನಕ್ಕೆ ಚಾಲನೆ ನೀಡಿದರು. ವರ್ತಮಾನ ಅನ್ನುವುದೇ ತಲ್ಲಣದ ವಿಷಯ ಯಾವ ವರ್ತಮಾನಕ್ಕೆ ಪೂರ್ವದ ಸಾಂಸ್ಕೃತಿಕ ಹಿನ್ನಲೆಯಿರುವುದಲ್ಲಿವೂ, ಪ್ರಗತಿಪರ ಭವಿಷ್ಯದ ಚಿಂತನೆಯಿರುವುದಿಲ್ಲವೋ ಅದು ಅಪಾಯಕಾರಿ ವರ್ತಮಾನವಾಗುತ್ತದೆ ಎಂದು ಹೇಳಿದರು.

ಖ್ಯಾತ ಕವಿ ನಾಡೋಜ ಡಾ.ಸಿದ್ಧಲಿಂಗಯ್ಯ ಸಮ್ಮೇಳನಾಧ್ಯಕ್ಷೆ ವಹಿಸಿ, ಅಧ್ಯಕ್ಷೀಯ ಭಾಷಣ ಮಾಡಿದರು. ದಲಿತರ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆ ಆಚರಣೆ ಸುದ್ದಿ ಮಾಧ್ಯಮಗಳಲ್ಲಿ,ದೃಶ್ಯ ಮಾಧ್ಯಮಗಳಲ್ಲಿ ನಿತ್ಯವೂ ವರದಿಯಾಗುತ್ತಿರುವುದು ಆತಂಕಕಾರಿಯಾಗಿದೆ. ಮಾನವ, ಮಂಗಳಗ್ರಹವನ್ನು ತಲುಪುವ ಸಂದರ್ಭದಲ್ಲೂ ಸಾವಿರಾರು ಕುಗ್ರಾಮಗಳಲ್ಲಿ ಅಸ್ಪೃಶ್ಯತೆ ಆಚರಣೆಯಲಿದ್ದು, ದಲಿತವರ್ಗದವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶ ಇಲ್ಲದಂತಾಗಿದೆ. ಈ ವರ್ಗದವರನ್ನು ದೇವಾಲಯ,ಉಪಹಾರಗೃಹ ಸಾರ್ವಜನಿಕ ಬಾವಿಗಳಿಂದ ದೂರ ಇಡಲಾಗಿದೆ. ಇವರಿಗೆ ಕ್ಷೌರವನ್ನೂ ನಿರಾಕರಿಸಿದ ಘಟನೆಗಳೂ ವರದಿಯಾಗುತ್ತಿವೆ. ಗಾಂಧಿ, ಅಂಬೇಡ್ಕರ್ ಅವರುಗಳ ಕನಸು ನನಸಾಗಬೇಕಾಗಿದೆ. ಈ ಅನಿಷ್ಠ ಪದ್ಧತಿಯನ್ನು ತೊಡೆದು ಹಾಕಲು ದಲಿತವರ್ಗದವರು ಜಾಗೃತರಾಗುವುದರ ಜೊತೆಗೆ ಅಸ್ಪೃಶ್ಯತಾ ನಿವಾರಣಾ ಚಳುವಳಿಗಳಿಗೆ ಮೇಲ್ವರ್ಗದ ಯುವಕರೂ ಕೈಜೋಡಿಸಬೇಕೆಂದು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಪ್ರಸ್ತಾವನೆ ಮಾಡುತ್ತಾ, ಸಜ್ಜನರು ವಿದ್ಯಾಗಿರಿಯಲ್ಲಿ ಸೇರಿರುವುದರಿಂದ ಶಿಕ್ಷಣ ಕೇಂದ್ರ ಪಾವನವಾಗಿದೆ. ಪ್ರಾದೇಶಿಕ ಭಾಷೆಗಳ ಅವಲೋಕನವಾಗಬೇಕು. ಈ ಮೂಲಕ ನಾಡಿಗೆ ಒಳ್ಳೆಯ ಸಂದೇಶ ಸಿಗುವಂತಾಗಬೇಕಾಗಿದೆ. ಕನ್ನಡದ ಮನಸ್ಸುಗಳನ್ನು ಒಂದೇ ಸೂರಿನಲ್ಲಿರಿಸುವ ಪ್ರಯತ್ನ ನುಡಿಸಿರಿಯಾಗಿದೆ ಎಂದರು.
ರಾಜ್ಯ ಯುವಜನಸೇವಾ ಸಚಿವ ಕೆ.ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾಣರ್ಿಕ್, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಮೂಡುಬಿದಿರೆ ಪುರಸಭಾಧ್ಯಕ್ಷೆ ಸುಪ್ರಿಯಾ.ಡಿ.ಶೆಟ್ಟಿ, ಆಳ್ವಾಸ್ ಸಂಸ್ಥೆ ಟ್ರಸ್ಟಿ ಜಯಶ್ರೀ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು.







