ಉಳ್ಳಾಲದಲ್ಲಿ ಯಾವುದೇ ದಾಳಿ ಆಗಿಲ್ಲ: ದಾಳಿ ಎಂಬುವುದು ಸುಳ್ಳು ಸುದ್ದಿ: ಯುವಕನ ಮೇಲೆ ಕ್ರಮ ಎಂದ ಕಮೀಷನರ್
ಮಂಗಳೂರು: ಕೋಮುಸೂಕ್ಷ್ಮ ಉಳ್ಳಾಲದಲ್ಲಿ ಇಂದು ಬೆಳಗ್ಗೆ ತನ್ನ ಮೇಲೆ ತಂಡವೊಂದು ಕೊಲೆಗೆ ಯತ್ನಿಸಿದ್ದು ಎಂದು ಸುಳ್ಳು ಸುದ್ದಿ ಹರಡುತ್ತಿದೆ. ಈ ಬಗ್ಗೆ ಸುಳ್ಳು ಕಥೆ ಕಟ್ಟಿದ ಯುವಕನೋರ್ವನ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಉಚ್ಚಿಲ ಜಾಲ ಹಿತ್ತಿಲು ನಿವಾಸಿ ಕಿಶೋರ್ ಸಾಲ್ಯಾನ್ ಎಂಬಾತ ಇಂದು ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ತನ್ನ ಮೇಲೆ ಆಗಂತುಕರ ತಂಡವೊಂದು ಮಾರಾಕಾಸ್ತ್ರಗಳಿಂದ ಹಿಡಿದು ಅಟ್ಟಾಡಿಸಿದ್ದಾರೆ ಎಂದು ಮನೆಗೆ ಬಂದು ಹೇಳಿದ್ದಾನೆ. ಕ್ಷಣಾರ್ಧದಲ್ಲಿ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ‘ಈ ಬಗ್ಗೆ ಆತನನ್ನು ನಾನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದ್ದು, ಆತನೇ ಮನೆಗೆ ಬಂದು ಸುಳ್ಳು ಸುದ್ದಿ ಸೃಷ್ಟಿಸಿದ್ದಾನೆ. ಆತನ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.