ಬಂಟ್ವಾಳ: ಕಾರಿಂಜ, ನರಹರಿ ಪರ್ವತದಲ್ಲಿ ತೀರ್ಥಸ್ನಾನ
ಬಂಟ್ವಾಳ: ತಾಲ್ಲೂಕಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಮಹತೋಭಾರ ಕಾರಿಂಜೇಶ್ವರ ದೇವಸ್ಥಾನದ ಗದಾತೀರ್ಥ ಕೆರೆಯಲ್ಲಿ ಜು.28ರಂದು ಗುರುವಾರ ಆಟಿ ಅಮಾವಾಸ್ಯೆ ಪ್ರಯುಕ್ತ ಭಕ್ತರು ತೀರ್ಥಸ್ನಾನ ಮಾಡಿದರು.
ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಸಮೀಪದ ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿ ಗುರುವಾರ ಆಟಿ ಅಮಾವಾಸ್ಯೆ ಪ್ರಯುಕ್ತ ಭಕ್ತರು ತೀರ್ಥಸ್ನಾನ ಮಾಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಇಲ್ಲಿನ ಬಂಡೆ ಮೇಲಿರುವ ಶಂಖ, ಚಕ್ರ, ಗದಾ, ಪದ್ಮ ತೀರ್ಥ ಕುಂಡಗಳಲ್ಲಿ ಮಿಂದು ಬಳಿಕ ಅಡಿಕೆ ವೀಳ್ಯದೆಲೆ ತೀರ್ಥ ಕೆರೆಗೆ ಸಮರ್ಪಿಸಿದರು.
ಹಗ್ಗದ ಹರಿಕೆ ಸೇರಿದಂತೆ ಸದಾಶಿವ ದೇವರಿಗೆ ರುದ್ರಾಭಿಷೇಕ, ವಿನಾಯಕ ಮತ್ತು ನಾಗದೇವರಿಗೂ ವಿಶೇಷ ಪೂಜೆ ಸಲ್ಲಿಸಿದರು. ತಾಲ್ಲೂಕಿನಲ್ಲಿ ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಗಣನೀಯ ಇಳಿಮುಖವಾಗಿದ್ದು, ಪ್ರಧಾನ ಅರ್ಚಕ ಪರಮೇಶ್ವರ ಮಯ್ಯ ಪೂಜಾ ವಿಧಿ ವಿಧಾನ ನೆರವೇರಿಸಿದರು. ತುಳು ಚಿತ್ರನಡ ಚಿತ್ರನಟ ನವೀನ್ ಡಿ.ಪಡೀಲು ಸಹಿತ ಸಾವಿರಾರು ಮಂದಿ ಭಕ್ತರು ಭೇಟಿ ನೀಡಿದರು.
ಕ್ಷೇತ್ರದ ಆಡಳಿತ ಮೋಕ್ತೆಸರ ಡಾ. ಪ್ರಶಾಂತ್ ಮಾರ್ಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಆತ್ಮರಂಜನ್ ರೈ ಮತ್ತಿತರರು ಇದ್ದರು.
ಇಲ್ಲಿನ ಪುರಾಣ ಪ್ರಸಿದ್ಧ ಮಹತೋಭಾರ ಕಾರಿಂಜೇಶ್ವರ ದೇವಸ್ಥಾನದಲ್ಲಿ ಗುರುವಾರ ಆಟಿ ಅಮವಾಸ್ಯೆ ಪ್ರಯುಕ್ತ ಸಾವಿರಾರು ಮಂದಿ ಭಕ್ತರು ತೀರ್ಥಸ್ನಾನ ಮಾಡಿದರು. ಕಾರಿಂಜ ರಥಬೀದಿ ಬಳಿ ಇರುವ ಗದಾತೀರ್ಥ ಕೆರೆಯಲ್ಲಿ ಸ್ನಾನ ಮಾಡಿದ ಭಕ್ತರು ಕೆರೆಗೆ ದೀಪ ಸಹಿತ ಧವಸ ಧಾನ್ಯ ಸಮರ್ಪಿಸಿದರು. ಇದೇ ವೇಳೆ ಬಂಡೆ ಮೇಲಿರುವ ಜಾನು ತೀರ್ಥ ಮತ್ತು ಉಂಗುಷ್ಠತೀರ್ಥ ಕುಂಡದಲ್ಲಿ ತೀರ್ಥ ಪ್ರೋಕ್ಷಣೆ ಮಾಡಿ ಬಳಿಕ ಪಾರ್ವತೀ-ಪರಮೇಶ್ವರ ದೇವರಿಗೆ ಪ್ರತ್ಯೇಕ ಪೂಜೆ ಸಲ್ಲಿಸಿದರು.
ಅರ್ಚಕ ಜಯಶಂಕರ ಉಪಾಧ್ಯಾಯ ಮತ್ತು ಮಿಥುನ್ ಭಟ್ ನಾವಡ ವಿವಿಧ ಪೂಜಾ ವಿಧಿ ವಿಧಾನ ನೆರವೇರಿಸಿದರು. ಇಲ್ಲಿನ ಮಧ್ವ ಓಂಕಾರ ಫ್ರೆಂಡ್ಸ್ ಮತ್ತು ಓಂಕಾರ ಮಹಿಳಾ ಘಟಕ ವತಿಯಿಂದ ಕಷಾಯ ವಿತರಣೆ ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು ಮತ್ತಿತರರು ಇದ್ದರು.