ಬಂಟ್ವಾಳ: ನಿವೃತ್ತ ಉಪ ಶಾಖಾಧಿಕಾರಿಗೆ ಸನ್ಮಾನ ಉಳಿತಾಯ ಮತ್ತು ಜೀವನ ಭದ್ರತೆಗೆ ಎಲ್ಲೈಸಿ ಅಗತ್ಯ: ರಾಜೇಶ್ ಮುಧೋಳ್
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಭಾರತೀಯ ಜೀವ ವಿಮಾ ನಿಗಮದಲ್ಲಿ ಉಪಶಾಖಾಧಿಕಾರಿಯಾಗಿ ನಿವೃತ್ತಿಗೊಂಡ ಸುಂದರ ಮೇರ ದಂಪತಿಯನ್ನು ಜು.02ರಂದು ಶನಿವಾರ ಸನ್ಮಾನಿಸಲಾಯಿತು.
ದೇಶದಲ್ಲಿ ಜನತೆಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸರ್ಕಾರಕ್ಕೆ ಆರ್ಥಿಕ ನೆರವು ನೀಡುವುದರ ಜೊತೆಗೆ ಜನರಲ್ಲಿ ಉಳಿತಾಯ ಮತ್ತು ಜೀವನ ಭದ್ರತೆ ಒದಗಿಸುವಲ್ಲಿ ಭಾರತೀಯ ಜೀವ ವಿಮಾ ನಿಗಮ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದು ಎಲ್ಲೈಸಿ ಉಡುಪಿ ವಿಭಾಗೀಯ ಆಧಿಕಾರಿ ರಾಜೇಶ್ ಮುಧೋಳ್ ಹೇಳಿದ್ದಾರೆ.
ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಎಲ್ಲೆöÊಸಿ ಪ್ರತಿನಿಧಿಗಳು ಸಹಿತ ಕ್ರೀಡಾ ಮತ್ತು ಮನೋರಂಜನಾ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ವಿದಾಯ ಸಮಾರಂಭದಲ್ಲಿ ಬಂಟ್ವಾಳ ಉಪಶಾಖಾಧಿಕಾರಿ ಸುಂದರ ಮೇರ ಮತ್ತು ಮೀನಾಕ್ಷಿ ದಂಪತಿಯನ್ನು ಸನ್ಮಾನಿಸಿ ಅವರು ಮಾತನಾಡಿದರು.
ಮುಖ್ಯ ಪ್ರಬಂಧಕ ನಾರಾಯಣ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾರುಕಟ್ಟೆ ಮೆನೇಜರ್ ರಮೇಶ ಭಟ್, ಉಪ ಶಾಖಾಧಿಕಾರಿ ವಿಮಾ ಪ್ರತಿನಿಧಿಗಳ ಸಂಘದ ವಿಭಾಗೀಯ ಅಧ್ಯಕ್ಷ ಲೋಕೇಶ ಶೆಟ್ಟಿ ಧರ್ಮಸ್ಥಳ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ವಸಂತ ಬಾಳಿಗಾ, ಮೊಗೇರ ಸಂಘದ ಅಧ್ಯಕ್ಷ ಸೀತಾರಾಮ ಕೊಂಚಾಡಿ, ದಾವಣಗೆರೆ ಜಗಳೂರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಕೆ.ಮಂಜುನಾಥ ಶುಭ ಹಾರೈಸಿದರು. ಉಪ ಶಾಖಾಧಿಕಾರಿ ಕೃಪಾಲ್ ತೀರ್ಥಹಳ್ಳಿ, ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ, ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ ಆಚಾರ್ಯ, ಮಾಜಿ ಅಧ್ಯಕ್ಷ ಜಯಂತ ಶೆಟ್ಟಿ, ಪ್ರಾಂತೀಯ ಮಾಜಿ ಅಧ್ಯಕ್ಷ ಸಂಜೀವ ಶೆಟ್ಟಿ, ಬಿ.ಸಿ.ರೋಡು, ಪ್ರಮುಖರಾದ ಮಧ್ವರಾಜ ಕಲ್ಮಾಡಿ, ಜಯದೇವ್ ಬೆಳ್ತಂಗಡಿ, ದಿನೇಶ ಮಾಮೇಶ್ವರ, ಸತೀಶ್ ಮತ್ತಿತರರು ಇದ್ದರು.
ಇದೇ ವೇಳೆ ಎಲ್ಲೈಸಿ ಸಿಬ್ಬಂದಿಗಳು ಮತ್ತು ಪ್ರತಿನಿಧಿಗಳಿಂದ ‘ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನಗೊಂಡಿತು. ರಘುಚಂದ್ರ ಸ್ವಾಗತಿಸಿ, ವಸಂತ ಪ್ರಭು ವಂದಿಸಿದರು. ಶಿಕ್ಷಕ ಧರಣೇಂದ್ರ ಜೈನ್ ಮತ್ತು ನಾರಾಯಣ ಬಲ್ಯ ಕಾರ್ಯಕ್ರಮ ನಿರೂಪಿಸಿದರು.