ನಡುಮೊಗರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರೂ ೪೨ಲಕ್ಷ ವೆಚ್ಚದ ನೂತನ ಕಟ್ಟಡ ಲೋಕಾರ್ಪಣೆ
ಬಂಟ್ವಾಳ: ತಾಲ್ಲೂಕಿನ ಮಣಿನಾಲ್ಕೂರು ಗ್ರಾಮದ ನಡುಮೊಗರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ರೂ ೪೨ಲಕ್ಷ ವೆಚ್ಚದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತç ಮತ್ತು ಉಚಿತ ಪುಸ್ತಕ ವಿತರಿಸಲಾಯಿತು. ಶಾಸಕ ರಾಜೇಶ ನಾಯ್ಕ್ ಮತ್ತಿತರರು ಇದ್ದಾರೆ.
ಕಳೆದ ಬಜೆಟಿನಲ್ಲಿ ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ರೂ ೧೫ ಸಾವಿರ ಕೋಟಿ ಮೊತ್ತದ ಅನುದಾನ ಮೀಸಲಿಡುವ ಮೂಲಕ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಈ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳಿಗೆ ಸುಮಾರು ೧೦೦ ಕೊಠಡಿ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದ್ದಾರೆ. ಇಲ್ಲಿನ ಮಣಿನಾಲ್ಕೂರು ಗ್ರಾಮದ ನಡುಮೊಗರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೂ ೪೨ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಕಟ್ಟಡ ಕುಸಿತಕ್ಕೀಡಾದ ವೇಳೆ ದಿವಂಗತ ಶಿವರಾಮ ಶೆಟ್ಟಿ ನಡುಮೊಗರುಗುತ್ತು ಅವರ ಮನವಿಯಂತೆ ಈಗಾಗಲೇ ನಾಲ್ಕು ಕೊಠಡಿ ಒದಗಿಸಲಾಗಿದ್ದು, ಇದೀಗ ಎಂ.ಆರ್.ಪಿ.ಎಲ್ ಮತ್ತು ಶಾಸಕರ ನಿಧಿ ಮೂಲಕ ನೂತನ ಕಟ್ಟಡ ನಿರ್ಮಾಣಗೊಂಡಿದೆ ಎಂದರು. ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಈ ದೇಶಕ್ಕೆ ಮಕ್ಕಳು ಮುಂದಿನ ಆಸ್ತಿಯಾಗಬೇಕು ಎಂದರು.
ಮಣಿನಾಲ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗವೇಣಿ, ಸದಸ್ಯರಾದ ಪ್ರೆಸಿಲ್ಲಾ ಡಿ.ಸೋಜ, ಯೋಗೀಶ್ ಶೆಟ್ಟಿ ಆರ್ಮುಡಿ, ಕಾಂಚಲಾಕ್ಷಿ, ಪುರುಷೋತ್ತಮ ಪೂಜಾರಿ, ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆ ಶಕುಂತಲಾ ಶಿವರಾಮ ಶೆಟ್ಟಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಾಯಿಗಿರಿಧರ್ ಶೆಟ್ಟಿ, ಉದ್ಯಮಿ ಕುಸುಮೋಧರ ಶೆಟ್ಟಿ ಚೆಲ್ಲಡ್ಕ, ಡಾ.ಶ್ಯಾಮಪ್ರಸಾದ್ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಎಂ.ಆರ್.ಪಿ.ಎಲ್ ಪ್ರತಿನಿಧಿ ರಾಕೇಶ್ ಕೆ., ಎಲ್ಲೈಸಿ ಅಭಿವೃದ್ದಿ ಅಧಿಕಾರಿ ವಸಂತ ಕುಮಾರ್ ಶೆಟ್ಟಿ, ಉದ್ಯಮಿ ರೋಹಿತ್ ಶೆಟ್ಟಿ ನಗ್ರಿಗುತ್ತು, ಪ್ರಮುಖರಾದ ಶಾಂತಪ್ಪ ಪೂಜಾರಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಉಮೇಶ್ ಕೆ. ನಡುಮೊಗರು ಯುವಕ ಮಂಡಲ ಅಧ್ಯಕ್ಷ ದಯಾನಂದ, ಮುಖ್ಯಶಿಕ್ಷಕ ಚಂದ್ರ ಕೆ. ಇದ್ದರು.
ಇದೇ ವೇಳೆ ಬಿಸಿಯೂಟ ಕಟ್ಟಡಕ್ಕೆ ಶಿಲಾನ್ಯಾಸ, ಮಕ್ಕಳಿಗೆ ಸಮವಸ್ತç ಸಹಿತ ಉಚಿತ ಪುಸ್ತಕ ಮತ್ತು ಬ್ಯಾಗ್ ವಿತರಿಸಲಾಯಿತು. ಸಹ ಶಿಕ್ಷಕ ಮಧುಸೂದನ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಶಿಕ್ಷಕ ಚಂದ್ರ ಕೆ. ವಂದಿಸಿದರು. ಶಿಕ್ಷಕ ಸಂದೇಶ್ ಎಂ.ಗೌಡ ಕಾರ್ಯಕ್ರಮ ನಿರೂಪಿಸಿದರು.