ಕೈಕಂಬ : ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಾಸಕ ರಾಜೇಶ್ ನಾಯ್ಕ್ ಹಾಗೂ ಬಂಟ್ವಾಳ ತಾಲೂಕು ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿಯರ ಸಾರಥ್ಯದಲ್ಲಿ ಹೊಸ ಪರಿಕಲ್ಪನೆಯೊಂದಿಗೆ ಆಯೋಜಿಸಲಾದ `ಕಮಲೋತ್ಸವ’ ದೇಶ ಅಥವಾ ರಾಜ್ಯದಲ್ಲೇ ಪ್ರಥಮವಾಗಿದ್ದು, ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ಕುಟುಂಬವನ್ನು ಒಂದೇ ಸೂರಿನಡಿ ಕಾಣುವ ಮಹತ್ವದ ‘ಉತ್ಸವ’ ಇದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಗಂಜಿಮಠದ ಒಡ್ಡೂರು ಫಾರ್ಮ್ಹೌಸ್‌ನಲ್ಲಿ ಎ.28ರಂದು ಗುರುವಾರ ನಡೆದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಮಲೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಗೋಪೂಜೆ ಹಾಗೂ ದೀಪ ಬೆಳಗಿಸಿ ಮಾತನಾಡಿದರು.

ಬಂದರು ಮತ್ತು ಮೀನುಗಾರಿಕೆ ಸಚಿವ ಅಂಗಾರ ಮಾತನಾಡಿ, ತಾವರೆ ಅಥವಾ ಕಮಲ ಹೂವಿಂದ ಗುರುತಿಸಲ್ಪಡುವ ಬಿಜೆಪಿಯಲ್ಲಿ ‘ಕಮಲೋತ್ಸವ’ ಹೊಸತಾಗಿದ್ದರೂ, ಹೆಚ್ಚು ಅರ್ಥಗರ್ಭಿತವಾಗಿದೆ. ಸಂಘಟನಾತ್ಮಕ ದೃಷ್ಟಿಯಲ್ಲಿ ಇದು ಮುಖ್ಯ ಎಂದರು.

ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಬಿಜೆಪಿ ಕುಟುಂಬ ಕಾರ್ಯಕ್ರಮ ಇದಾಗಿದ್ದು, ಪಕ್ಷವು ಅಭಿವೃದ್ಧಿಯೊಂದಿಗೆ ಕಾರ್ಯಕರ್ತರ ಸಹಿತ ಪಕ್ಷ ಸಂಘಟನೆಗೂ ಮಹತ್ವ ನೀಡುತ್ತಿದೆ. ಕಾರ್ಯಕ್ರಮಗಳು ಯಾವುದೇ ಇರಲಿ, ತತ್ವ ಸಿದ್ಧಾಂತದೊಂದಿಗೆ ಕೆಲಸ ಮಾಡುವ ಕಾರ್ಯಕರ್ತರು ಹಿಂದೂತ್ವ ವಿಷಯದಲ್ಲಿ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು.

ಕಮಲೋತ್ಸವ ಸಂಘಟಕರ ವಿಚಾರಧಾರೆ ಬಗ್ಗೆ ಶಾಸಕ ರಾಜೇಶ್ ನಾಯ್ಕ್ ಹೆಮ್ಮೆ ವ್ಯಕ್ತಪಡಿಸಿದರೆ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ ಮೂಡಬಿದ್ರೆ ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸಿದರು.
ಬಂಟ್ವಾಳ ತಾಲೂಕು(ಮಂಡಲ) ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮುಖಂಡ ದೇವದಾಸ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರೆ, ರವಿ ಶೆಟ್ಟಿ ವಂದಿಸಿದರು. ಕಮಲೋತ್ಸವದಲ್ಲಿ ಸಾವಿರಾರು ಕಾರ್ಯಕರ್ತರು, ಅವರ ಕುಟುಂಬ ಸದಸ್ಯರು, ಮುಖಂಡರು, ಗ್ರಾಮಸ್ಥರು ಪಾಲ್ಗೊಂಡರು. ಇದೇ ವೇಳೆ ಒಡ್ಡೂರಿನಲ್ಲಿರುವ ಶಾಸಕರ ಮನೆಯಲ್ಲಿ ಐಡಿಯಲ್ ಕಂಪೆನಿಯ ಹೊಸರುಚಿಯ ವಿನೂತನ ಐಸ್‌ಕ್ಯಾಂಡಿಯೊಂದನ್ನು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಬಿಡುಗಡೆಗೊಳಿಸಿದರು.
ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಶುಭಹಾರೈಸಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಭಟ್, ಅಲೆಮಾರಿ ಅಭಿವೃದ್ಧಿ ನಿಗಮದ ರವೀಂದ್ರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು ಬೂಡಾ ಅಧ್ಯಕ್ಷ ದೇವದಾಸ್ ಶೆಟ್ಟಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ವಂದಿಸಿದರು.
ಕೇಸರಿ ಜಾತ್ರೆ…!
ಕಮಲೋತ್ಸವ ಏರ್ಪಡಿಸಲಾಗಿದ್ದ ಒಡ್ಡೂರು ಫಾರ್ಮ್ಹೌಸ್‌ನಲ್ಲಿ ಎಲ್ಲಿ ದೃಷ್ಟಿ ಹಾಯಿಸಿದರೂ ಕೇಸರಿ ಬಣ್ಣ ರಾರಾಜಿಸುತ್ತಿತ್ತು. ಕೇಸರಿ ಶಾಲು, ಕೇಸರಿ ಟೊಪ್ಪಿ, ಕೇಸರಿ ಲುಂಗಿ ತೊಟ್ಟ ಸ್ತ್ರೀ-ಪುರುಷ ಕಾರ್ಯಕರ್ತರು ತುಂಬಿದ್ದರು. ಮಕ್ಕಳು, ಮಹಿಳೆಯರು, ವಯೋವೃದ್ಧರು, ಯುವಜನರು ಸೇರಿರುವ ಕಮಲೋತ್ಸವವು ಪಕ್ಷದ ವಾರ್ಷಿಕ ಜಾತ್ರೆಯಂತೆ ಕಂಡು ಬಂತು.
ಯುವಜನರಿಗಾಗಿ ವಾಲಿಬಾಲ್, ಶಾರ್ಟ್ಫುಟ್ ಮತ್ತಿತರ ಕ್ರೀಡೆ ಆಯೋಜಿಸಲಾಗಿದ್ದರೆ, ಮಕ್ಕಳ ಮನೋರಂಜನೆಗಾಗಿ ತೊಟ್ಟಿಲು ತಿರುಗುತ್ತಿತ್ತು. ಉರಿಯುವ ಬಿಸಿಲ ಬೇಗೆ ನಿವಾರಿಸಲು ನಿರಂತರ ಉಚಿತವಾಗಿ ಗೋಲಿ ಸೋಡಾ, ಲೆಂಬೆ ಪಾನೀಯ, ಕಬ್ಬಿನ ಹಾಲು, ಚುರುಮುರಿ, ಕಲ್ಲಂಗಡಿ ಹಾಗೂ ಇತರ ತಂಪು ಪಾನೀಯಗಳ ವ್ಯವಸ್ಥೆ ಮಾಡಲಾಗಿತ್ತು. ತಂಪು ಪಾನೀಯದ ಸಾಲಿನಲ್ಲಿ ಗೋಲಿ ಸೋಡಾಕ್ಕೆ ಭಾರೀ ಬೇಡಿಕೆ ಕಂಡು ಬಂದಿದ್ದು, ಜನ ಮುಗಿಬಿದ್ದಿದ್ದಾರೆ. ಬೆಳಿಗ್ಗಿನಿಂದ ಉಪಾಹಾರ ನಡೆದರೆ, ಮಧ್ಯಾಹ್ನ ಬಿರಿಯಾನಿ ಮತ್ತು ಶಾಖಾಹಾರಿ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು. ಮಹಿಳೆಯರಿಗಾಗಿ ಒಂದೆಡೆ ಬಳೆ ಹಾಗೂ ಇತರ ಶೃಂಗಾರ ಸಾಧನಗಳು ಉಚಿತವಾಗಿ ವಿತರಿಸಲಾಗುತ್ತಿತ್ತು.



