ಬಂಟ್ವಾಳ: ಇಲ್ಲಿನ ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಇದೇ ೨೯ರಿಂದ ಮೇ ೨೯ರತನಕ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಮುಖ್ಯವೃತ್ತ ಸಮೀಪದ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಉಚಿತ ‘ಕರಾವಳಿ ಕಲೋತ್ಸವ-೨೦೨೨’ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿದೆ ಎಂದು ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಹೇಳಿದ್ದಾರೆ.

ಬಿ.ಸಿ.ರೋಡಿನಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಗ್ರಾಮೀಣ ಜನತೆಗೆ ಮನೋರಂಜನೆ ಜೊತೆಗೆ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮಕ್ಕಳ ಚಿಣ್ಣರೋತ್ಸವ, ನಾಟಕೋತ್ಸವ, ರಾಜ್ಯ ಮಟ್ಟದ ಫಿಲ್ಮ್ ಡ್ಯಾನ್ಸ್ ಸ್ಪರ್ಧೆ, ಜಿಲ್ಲಾ ಮಟ್ಟದ ಸಿಂಗಾರಿ ಮೇಳ ಸ್ಪರ್ಧೆ, ಜಾನಪದ ನೃತ್ಯ, ಭರತನಾಟ್ಯ, ಯಕ್ಷಗಾನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಟ್ರಸ್ಟ್ ನ ಪ್ರಧಾನ ಸಂಚಾಲಕ ಮೋಹನದಾಸ್ ಕೊಟ್ಟಾರಿ ಮಾತನಾಡಿ, ಒಂದು ತಿಂಗಳ ತನಕ ನಡೆಯುವ ಈ ಕಲೋತ್ಸವಕ್ಕೆ ಇದೇ ೨೯ ರಂದು ಸಂಜೆ ಗಂಟೆ ೪.೩೦ಕ್ಕೆ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದಿಂದ ಆಕರ್ಷಕ ಮೆರವಣಿಗೆ ನಡೆಯಲಿದೆ. ಸಂಜೆ ಗಂಟೆ ೬.೩೦ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಕರಾವಳಿ ಕಲೋತ್ಸವ ಉದ್ಘಾಟಿಸುವರು. ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಅಧ್ಯಕ್ಷತೆ ವಹಿಸುವರು.

ಕೀರ್ತಿ ಶೇಷ ಡಾ. ಲಕ್ಷ್ಮೀನಾರಾಯಣ ಆಳ್ವ ಕಲಾ ವೇದಿಕೆ, ಚಿಣ್ಣರಲೋಕ ನಿರಾಶ್ರಿತರ ಸೇವಾಶ್ರಮದ ನೀಲ ನಕ್ಷೆ ಅನಾವರಣ, ಚಿಣ್ಣರ ಚಿತ್ರಕಲೆ ಪ್ರದರ್ಶನ, ಅಮ್ಯೂಸ್ ಮೆಂಟ್ ಪಾರ್ಕ್, ವಸ್ತುಪ್ರದರ್ಶನ ಮಳಿಗೆ ಉದ್ಘಾಟನೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಮಾಜಿ ಸಚಿವ ಬಿ.ರಮಾನಾಥ ರೈ, ಡಾ.ಎಂ.ಮೋಹನ ಆಳ್ವ ಮತ್ತಿತರ ಗಣ್ಯರು ಭಾಗವಹಿಸುವರು ಎಂದರು.

ಇದೇ ವೇಳೆ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ ‘ಕರಾವಳಿ ಸೌರಭ ರಾಜ್ಯ ಪ್ರಶಸ್ತಿ’ ಪ್ರದಾನ ಮತ್ತು ಕ್ಷಿತಿ ಕೆ.ರೈ, ಶೃತಿ ದೇವಾಡಿಗ ಇವರಿಗೆ ‘ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿ’ ಪ್ರಧಾನ ಮಾಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಚಿಣ್ಣರ ಅಧ್ಯಕ್ಷೆ ಜನ್ಯ ಪ್ರಸಾದ್, ನಿರ್ದೇಶಕ ಮಹಮ್ಮದ್ ನಂದಾವರ, ಮಂಜು ವಿಟ್ಲ ಇದ್ದರು.

By suddi9

Leave a Reply

Your email address will not be published. Required fields are marked *